
ಯಾದಗಿರಿ: ಜಿಲ್ಲೆಯ ಉಳಿದ ಐದು ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಹಾಗೂ ರಾಷ್ಟ್ರೀಕೃತ, ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ಕರೆ ನೀಡಿದ್ದ ಯಾದಗಿರಿ ಬಂದ್ ಯಶಸ್ವಿಯಾಯಿತು.
ಬೆಳಗ್ಗೆಯಿಂದಲೇ ಸರ್ವ ಸಂಘಟನೆಗಳ ಹೋರಾಟ ಸಮಿತಿ ಮುಖಂಡರು ಬೈಕ್‌ಗಳಲ್ಲಿ ಸಂಚರಿಸಿ, ಅನ್ನದಾತನಿಗೆ ಆಗಿರುವ ಅನ್ಯಾಯದ ವಿರುದ್ಧ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವ್ಯಾಪಾರಸ್ಥರು ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆಳಗ್ಗೆಯಿಂದಲೇ ಬಸ್ ಸಂಚಾರವೂ ಸ್ಥಗಿತಗೊಂಡಿತ್ತು.
ಮೈಲಾಪುರ ಅಗಸಿಯಿಂದ ಆರಂಭಗೊAಡ ಪಾದಯಾತ್ರೆ ಗಾಂಧಿ ವೃತ್ತ, ಬಾಬುಜಿ ವೃತ್ತ, ಕನಕ ವೃತ್ತ, ಅಂಬೇಡ್ಕರ್ ವೃತ್ತ, ಶಾಸ್ತ್ರಿ ವೃತ್ತ ಹಾಗೂ ಸುಭಾಷ್ ವೃತ್ತದ ಮೂಲಕ ಸಾಗಿತು. ಬಳಿಕ ಸುಭಾಷ್ ವೃತ್ತದಲ್ಲಿ ಬಹಿರಂಗ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮರೆಪ್ಪ ನಾಯಕ ಮೊಗದಂಪುರ, ದೇಶಕ್ಕೆ ಸ್ವಾತಂತ್ರ‍್ಯ ದೊರೆತು ಎಂಟು ದಶಕಗಳು ಕಳೆದರೂ ರೈತರ ಬದುಕು ಮತ್ತು ಸಂಕಷ್ಟಗಳು ದೂರವಾಗಿಲ್ಲ. ದೇಶಕ್ಕೆ ಅನ್ನ ನೀಡುವ ರೈತರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವಂತಹ ಯೋಜನೆಗಳನ್ನು ಸರ್ಕಾರಗಳು ಪರಿಣಾಮಕಾರಿಯಾಗಿ ಜಾರಿಗೆ ತರದಿರುವುದು ದುರದೃಷ್ಟಕರ ಎಂದರು.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸದೇ ಸರ್ಕಾರಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೆ.೧೭ರೊಳಗಾಗಿ ಯಾದಗಿರಿ ಜಿಲ್ಲೆಯ ಉಳಿದ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ಮಳೆಯಿಲ್ಲದೆ ರೈತರು ಹಾಗೂ ಜನಸಾಮಾನ್ಯರು ತತ್ತರಿಸಿದ್ದಾರೆ. ಆದರೆ ಸಚಿವರು, ಶಾಸಕರು ಹಾಗೂ ಸಂಸದರು ಸರ್ಕಾರಿ ವಾಹನ ಮತ್ತು ವಿವಿಧ ಭತ್ಯೆಗಳನ್ನು ಪಡೆದು ಸಂಚರಿಸುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವ ಜನಪ್ರತಿನಿಧಿಗಳು ಸರ್ಕಾರಿ ಭತ್ಯೆಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಜನಸೇನಾ ರಾಜ್ಯಾಧ್ಯಕ್ಷ ಮೈಲಾರಪ್ಪ ಜಾಗೀರದಾರ ಮಾತನಾಡಿ, ಜೂನ್ ಮೊದಲನೇ ವಾರದಲ್ಲಿ ಸುಮಾರು ಶೇ.೯೦ರಷ್ಟು ಬಿತ್ತನೆ ಮಾಡಿದ ರೈತರಿಗೆ ಜೂನ್ ಅಂತ್ಯ ಹಾಗೂ ಜುಲೈ ಮೊದಲನೇ ವಾರದವರೆಗೆ ಸಮರ್ಪಕ ಮಳೆಯಾಗದೆ ತೇವಾಂಶದ ಕೊರತೆಯಿಂದ ಬೆಳೆ ಮೊಳಕೆಯೊಡೆಯದೆ ನಷ್ಟವಾಗಿದೆ. ಕೆಲ ರೈತರು ಸಾಲ ಮಾಡಿ ಎರಡನೇ ಬಾರಿ ಬಿತ್ತನೆ ಮಾಡಿದರೂ ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಇದರಿಂದ ಸಾಲ-ಸೂಲ ಮಾಡಿಕೊಂಡಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸರ್ಕಾರ ವಾಸ್ತವ ಪರಿಸ್ಥಿತಿಯನ್ನು ಅರಿತು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ರಾಷ್ಟ್ರೀಕೃತ ಹಾಗೂ ಸ್ಥಳೀಯ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ವ ಸಂಘಟನೆಗಳ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನವರ ಮಾತನಾಡಿ, ಜಿಲ್ಲೆಯಲ್ಲಿ ಶೇ.೮೫ರಿಂದ ೯೦ರಷ್ಟು ಬೆಳೆ ಹಾನಿಯಾಗಿದ್ದರೂ ಸರ್ಕಾರ ಉಳಿದ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜನರು ಹಾಗೂ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದ್ದು, ರೈತರು ಮತ್ತು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಇದರಿಂದ ಪ್ರತಿದಿನ ಸಾವಿರಾರು ಜನರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ಮಹಾನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲೆಯ ಬರಗಾಲದ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.
ಸೆ.೧೭ರೊಳಗಾಗಿ ಉಳಿದ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿದ್ದರೆ, ಮುಂದಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಅಗತ್ಯಬಿದ್ದರೆ ಸಂಪೂರ್ಣ ಜಿಲ್ಲೆ ಬಂದ್ ಮಾಡಿ ಪ್ರತ್ಯೇಕ ರಾಜ್ಯದ ಬೇಡಿಕೆಯೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದೇವರಾಜ ನಾಯಕ, ಕಾಂತು ಪಾಟೀಲ್, ಬಸವರಾಜ ಪಡುಕೋಟೆ, ಗೌರವಾಧ್ಯಕ್ಷ ದೇವಿಂದ್ರಪ್ಪ ಎಚ್. ಯರಗೋಳ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ್, ಹಣಮಂತ ಇಟಗಿ, ರವಿಕೆ ಮುದ್ನಾಳ, ವಿಜಯಕುಮಾರ ಸಿರಗೋಳ, ಭೀಮಾಶಂಕರ ಆಲ್ದಾಳ, ಅಶೋಕ ಐಕೂರ, ವಿಶ್ವಾರಾಧ್ಯ ದಿಮ್ಮೆ, ಮಹಾವೀರ ಲಿಂಗೇರಿ, ಸಿದ್ದರಾಜರಡ್ಡಿ ತಂಗಡಗಿ, ಎಸ್. ನಿಜಲಿಂಗಪ್ಪ ಪೂಜಾರಿ, ಭೀಮು ಪೂಜಾರಿ, ಕಾಶಿನಾಥ ನಾಟೇಕರ್, ಕೃಷ್ಣಮೂರ್ತಿ ಕುಲಕರ್ಣಿ, ಕಾಶಪ್ಪ ಹೆಗ್ಗಣಗೇರಾ, ಎಂ.ಡಿ. ತಾಜ್, ಶರಣಪ್ಪ ಜಾಕನಳ್ಳಿ, ಅಜಯಕುಮಾರ ಮಾಸನ್, ಬಂಗಾರು ಜೆ.ಬಿ. ರಾಠೋಡ, ಪೋಲಪ್ಪ ನಾರಾಯಣೋರ, ವಿಜಯ ಭಾರತ, ಬಸ್ಸುಗೌಡ ಚಟ್ನಳ್ಳಿ, ಮಹಾದೇವಪ್ಪ ಕಣೇಕಲ್, ರಾಜಶೇಖರ ಎದುರುಮನಿ, ಭೀಮರಾಯ ಯಲ್ಹೇರಿ, ಮಲ್ಲಿಕಾರ್ಜುನ ಸಾಂಗ್ಲಿಯಾನ, ಬೀರೇಶ ಚಿರತೆನೋರ, ಚಂದ್ರಕಲಾ ಗುತ್ತೇದಾರ, ಮಾಯಾ ನಾಯಕ, ಅನಿಲ್ ಕುಮಾರ ಕರಾಟೆ, ಶಿವರಾಜ ದಾಸನಕೇರಿ, ನಿಂಗಪ್ಪ ಬೀರನಾಳ, ಸಿದ್ದಲಿಂಗಪ್ಪ ನಾಯಕ, ಸಿದ್ದಪ್ಪ ಪೂಜಾರಿ, ದೀಪಕ್ ಒಡೆಯರ್, ಮಂಜುನಾಥ ಬಡಿಗೇರ, ಚಂದ್ರಶೇಖರ ಕಡೇಸೂರ, ಸಾಬು ಹೋರುಂಚಾ, ವೀರೇಶ ಕಡೇಚೂರ, ನಾಗೇಂದ್ರ ರಾಯಚೂರ, ಮಾರ್ತಾಂಡಪ್ಪ ಮುಷ್ಟೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನAತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಅವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.





























