
ಯಾದಗಿರಿ : ಶಿಕ್ಷಣ, ಇತಿಹಾಸ, ಪ್ರಾಚ್ಯಶಾಸ್ತ್ರ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸುತ್ತಿರುವ ಕಲ್ಯಾಣ ಕರ್ನಾಟಕದ ಡಾ. ಸಾಯಿಬಣ್ಣ ಕಲ್ಲಪ್ಪ ಮೇಲಕಾರ ಅವರಿಗೆ ಧಾರವಾಡ ರೋಟರಿ ಕ್ಲಬ್ ವತಿಯಿಂದ ‘ಶಿಕ್ಷಣ ಶ್ರೀ-ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಪಿಎಚ್.ಡಿ. ಪದವಿ ಪಡೆದಿರುವ ಅವರು, ಇದೇ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಹಾಗೂ ಇತಿಹಾಸ-ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪಿಎಚ್.ಡಿ. ಮಾರ್ಗದರ್ಶಕರಾಗಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
೨೫ ವರ್ಷಗಳ ಬೋಧನೆ ಹಾಗೂ ೩೦ ವರ್ಷಗಳ ಸಂಶೋಧನಾ ಅನುಭವ ಹೊಂದಿರುವ ಡಾ. ಮೇಲಕಾರ ಅವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಃಔS ಸದಸ್ಯ, ಮೌಲ್ಯಮಾಪಕ ಹಾಗೂ ವಿವಿಧ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇತಿಹಾಸ, ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಂಶೋಧನೆಗಾಗಿ ರಾಷ್ಟ್ರೀಯ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ೫೦ಕ್ಕೂ ಹೆಚ್ಚು ಪ್ರಶಸ್ತಿ-ಗೌರವಗಳನ್ನು ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಕೋಲಿ, ಕಬ್ಬಲಿಗ, ತಳವಾರ, ಅಂಬಿಗ, ಬೆಸ್ತ, ಮೊಗವೀರ, ಹರಿಕಂತ್ರ ಸೇರಿದಂತೆ ವಿವಿಧ ಸಮುದಾಯಗಳ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಕುರಿತು ಸಂಶೋಧನೆ ನಡೆಸಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅಂಬಿಗರ ಚೌಡಯ್ಯ ಅವರ ಇತಿಹಾಸ ಹಾಗೂ ಸಮುದಾಯದ ವಿವಿಧ ವಿಚಾರಗಳ ಕುರಿತು ಅಧ್ಯಯನ ನಡೆಸಿರುವ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಬಡತನದಿಂದ ವಿದ್ಯಾಭ್ಯಾಸ ಪಡೆದು ಧಾರವಾಡದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಸಾಯಿಬಣ್ಣ ಮೇಲಕಾರ ಅವರಿಗೆ ಸಂದಿರುವ ‘ಶಿಕ್ಷಣ ಶ್ರೀ’ ಪ್ರಶಸ್ತಿ ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ ಎಂದು ಕೋಲಿ, ಕಬ್ಬಲಿಗ, ತಳವಾರ ಹಾಗೂ ವಿವಿಧ ಸಮುದಾಯಗಳ ಮುಖಂಡರು ಅಭಿನಂದಿಸಿದ್ದಾರೆ.





























