Home ಜಿಲ್ಲೆ ಸ್ವಾತಂತ್ರ‍್ಯ ಹೋರಾಟದ ಇತಿಹಾಸ ದಾಖಲಿಸುವುದು ಅತ್ಯಂತ ಮಹತ್ವದ ಕಾರ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಸ್ವಾತಂತ್ರ‍್ಯ ಹೋರಾಟದ ಇತಿಹಾಸ ದಾಖಲಿಸುವುದು ಅತ್ಯಂತ ಮಹತ್ವದ ಕಾರ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಸAಜೆವಾಣಿ ವಾರ್ತೆ,
ವಿಜಯಪುರ, ಅ.೨೮: ಅಖಂಡ ವಿಜಯಪುರ ಜಿಲ್ಲೆಯ ಸ್ವಾತಂತ್ರ‍್ಯ ಚಳವಳಿಯ ಇತಿಹಾಸ, ಹೋರಾಟಗಾರರ ಕೊಡುಗೆ ಹಾಗೂ ಅಂದಿನ ವಿವಿಧ ಹೋರಾಟಗಳ ಸ್ವರೂಪವನ್ನು ಸಮಗ್ರವಾಗಿ ದಾಖಲಿಸಿರುವ ‘ಅಖಂಡ ವಿಜಯಪುರ ಜಿಲ್ಲೆಯ ಸ್ವಾತಂತ್ರ‍್ಯ ಚಳವಳಿ’ ಮಹತ್ವದ ಗ್ರಂಥವನ್ನು ನಗರದ ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಕಲಬುರಗಿ ಪಾಲಿ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ಕೊಡುಗೆ ನೀಡಿದೆ. ಅಂತಹ ಹೋರಾಟದ ಇತಿಹಾಸವನ್ನು ದಾಖಲೆಗಳ ಆಧಾರದ ಮೇಲೆ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದರು.
ಅಖAಡ ವಿಜಯಪುರ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರು, ಸ್ಥಳೀಯ ಚಳವಳಿಗಳು ಹಾಗೂ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯನ್ನು ಆಧರಿಸಿ ಇಂತಹ ಸಂಶೋಧನಾತ್ಮಕ ಕೃತಿ ರೂಪಿಸಿರುವುದು ಶ್ಲಾಘನೀಯ. ಈ ಕೃತಿ ಮುಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.
ಕೃತಿಯ ಲೇಖಕ ದಿವಂಗತ ಜಿ.ಎ. ಬಿರಾದಾರ ಅವರು ಬಾಂಬೆ, ದೆಹಲಿ ಹಾಗೂ ಬೆಂಗಳೂರಿನ ಪತ್ರಾಗಾರಗಳು ಸೇರಿದಂತೆ ವಿವಿಧ ದಾಖಲೆ ಸಂಗ್ರಹಾಲಯಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಅಖಂಡ ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಇತಿಹಾಸ, ಸ್ವಾತಂತ್ರ‍್ಯ ಹೋರಾಟಗಾರರ ಚಟುವಟಿಕೆಗಳು, ವಿವಿಧ ಸಮುದಾಯಗಳ ಹೋರಾಟ ಹಾಗೂ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಕೃತಿಯಲ್ಲಿ ದಾಖಲಿಸಿದ್ದಾರೆ.
ಕೃತಿಯ ವಿಶೇಷತೆಯೆಂದರೆ, ಜಿಲ್ಲೆಯ ತಾಲೂಕುವಾರು ಸ್ಥಳೀಯ ಇತಿಹಾಸ ಹಾಗೂ ಸ್ವಾತಂತ್ರ‍್ಯ ಹೋರಾಟದ ಚಟುವಟಿಕೆಗಳನ್ನು ಮೂಲ ದಾಖಲೆಗಳ ಆಧಾರದ ಮೇಲೆ ವ್ಯವಸ್ಥಿತವಾಗಿ ನಿರೂಪಿಸಿರುವುದು. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ವಾತಂತ್ರ‍್ಯ ಚಳವಳಿಗಳು ಉತ್ತರ ಕರ್ನಾಟಕದ ಹೋರಾಟದ ಮೇಲೆ ಬೀರಿದ ಪರಿಣಾಮವನ್ನೂ ಕೃತಿ ವಿವರಿಸುತ್ತದೆ. ವ್ಯಾಪಕ ಅಧ್ಯಯನ, ಮೂಲ ದಾಖಲೆಗಳ ಸಂಗ್ರಹ ಮತ್ತು ಆಧಾರಸಹಿತ ನಿರೂಪಣೆಯಿಂದ ಕೃತಿ ಮಹತ್ವ ಪಡೆದುಕೊಂಡಿದೆ.
ಕೃತಿಯ ಕನ್ನಡ ಅನುವಾದಕ ಹೊಸದಿಲ್ಲಿಯ ಸಂತೋಷ ಉಪಾಧ್ಯಾಯ ಮಾತನಾಡಿ, ಇಂಗ್ಲಿಷ್‌ನಲ್ಲಿದ್ದ ಈ ಮಹತ್ವದ ಕೃತಿಯ ವಿಷಯವನ್ನು ಕನ್ನಡ ಓದುಗರಿಗೆ ತಲುಪಿಸುವ ಉದ್ದೇಶದಿಂದ ಅನುವಾದ ಕಾರ್ಯ ಕೈಗೊಳ್ಳಲಾಗಿದೆ. ಮೂಲ ಕೃತಿಯ ಆಶಯಕ್ಕೆ ಧಕ್ಕೆಯಾಗದಂತೆ ಅಧ್ಯಾಯವಾರು ಸರಳ ಕನ್ನಡದಲ್ಲಿ ಅನುವಾದಿಸಲಾಗಿದೆ. ಇದರಿಂದ ಸ್ವಾತಂತ್ರ‍್ಯ ಹೋರಾಟದ ಇತಿಹಾಸ ಸಾಮಾನ್ಯ ಓದುಗರಿಗೂ ತಲುಪಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಎಲ್.ಡಿ.ಇ. (ಡೀಮ್ಡ್) ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಮಾತನಾಡಿ, ಈ ಕೃತಿ ಸಂಶೋಧನಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ. ರಾಷ್ಟ್ರೀಯ ಚಳವಳಿಯ ಬೆಳವಣಿಗೆ, ಸ್ವಾತಂತ್ರ‍್ಯ ಹೋರಾಟದ ವಿವಿಧ ಹಂತಗಳು ಹಾಗೂ ಅವುಗಳ ಪ್ರಾದೇಶಿಕ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಇಂತಹ ಕೃತಿಗಳು ಸಹಕಾರಿಯಾಗುತ್ತವೆ. ಇತಿಹಾಸದ ಮಹತ್ವದ ಸಂಗತಿಗಳು ಕಾಲಕ್ರಮೇಣ ಮರೆಯಾಗದಂತೆ ಅವುಗಳನ್ನು ದಾಖಲಿಸಿ ಕನ್ನಡದಲ್ಲಿ ಪ್ರಕಟಿಸಿರುವುದು ಪ್ರಶಂಸನೀಯ ಎಂದರು.
ದಿವAಗತ ಜಿ.ಎ. ಬಿರಾದಾರ ಅವರ ಪತ್ನಿ ಗೀತಾ ಜಿ. ಬಿರಾದಾರ ಮಾತನಾಡಿ, ತಮ್ಮ ಪತಿಯವರು ಜಿಲ್ಲೆಯ ಇತಿಹಾಸ ದಾಖಲಿಸುವ ಕಾರ್ಯಕ್ಕೆ ಅಪಾರ ಶ್ರಮ ವಹಿಸಿದ್ದರು. ವಿವಿಧ ಸ್ಥಳಗಳಿಗೆ ಭೇಟಿ ನೀಡಿ ದಾಖಲೆ ಹಾಗೂ ಮಾಹಿತಿಗಳನ್ನು ಸಂಗ್ರಹಿಸಿ ಅವರು ರಚಿಸಿದ ಈ ಕೃತಿ ಅವರ ಮಹತ್ವದ ಕೊಡುಗೆಯಾಗಿದೆ. ಈ ಕೃತಿ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದು ಸ್ಮರಿಸಿದರು.
ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ, ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಭಾಷ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ವಿ.ಡಿ. ಐಹೊಳಿ ವಂದಿಸಿದರು.