ಯಾದಗಿರಿ: ವೈದ್ಯರು ಮತ್ತು ಪತ್ರಕರ್ತರು ಸಮಾಜದ ಎರಡು ಪ್ರಮುಖ ಸ್ತಂಭಗಳಾಗಿದ್ದು, ಅವರ ಸೇವೆ ಸಮಾಜದ ಅಭಿವೃದ್ಧಿಗೆ ಅನನ್ಯ ಕೊಡುಗೆಯಾಗಿದೆ ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಹೇಳಿದರು.
ನಗರದ ನಾಯ್ಕೋಡಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯರು ಕಣ್ಣಿಗೆ ಕಾಣುವ ದೇವರುಗಳಂತೆ ರೋಗಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಾರೆ. ಅವರ ಸೇವೆ ಮಾನವೀಯತೆಯ ಪ್ರತೀಕವಾಗಿದೆ ಎಂದು ಹೇಳಿದರು.
ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ತಮ್ಮ ನೇರ, ನಿಷ್ಠುರ ಹಾಗೂ ಜವಾಬ್ದಾರಿಯುತ ಬರವಣಿಗೆಯ ಮೂಲಕ ಸಮಾಜದಲ್ಲಿನ ಅಕ್ರಮ, ಅವ್ಯವಸ್ಥೆ ಮತ್ತು ಸಮಸ್ಯೆಗಳನ್ನು ಬೆಳಕಿಗೆ ತಂದು, ಅವುಗಳ ನಿವಾರಣೆಗೆ ದಾರಿ ಮಾಡಿಕೊಡುವ ಮೂಲಕ ಸಮಾಜದ ಪರಿವರ್ತನೆಗೆ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಹುಲ್ ಎಸ್. ನಾಯ್ಕೋಡಿ, ವೈದ್ಯರು ಮತ್ತು ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಜನಸೇವೆಯೇ ಧ್ಯೇಯವಾಗಿಸಿಕೊಂಡು ಎರಡೂ ವೃತ್ತಿಯವರು ನಿರಂತರವಾಗಿ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರು ವೈದ್ಯರು ಮತ್ತು ಪತ್ರಕರ್ತರನ್ನು ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಕಾವಲಿ, ಭೀಮರಾಯ ಜಂಗಳಿ, ಬಸಲಿಂಗಪ್ಪ ನಾಯಕ್ ಹುಲಕಲ್, ಭೀಮಣ್ಣ ಲಕ್ಷ್ಮಂಪುರ, ಮಾಳಪ್ಪ ಪೂಜಾರಿ ಗೋಡಿಹಾಳ ಹಾಗೂ ನಾಯ್ಕೋಡಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಗಣ್ಯರು ಉಪಸ್ಥಿತರಿದ್ದರು.





























