
ಕಲಬುರಗಿ,ಸೆ.9: ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಸುಕ್ಷೇತ್ರ ಬಂಡೆ ರಾಚೋಟೇಶ್ವರ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನೆರವೇರಿತು.
ನಂತರ ಭಕ್ತರು ಅವರವರ ಮನೆಯಿಂದ ತಂದ ಭಕ್ಷ ಭೋಜನಗಳಾದ ಹೋಳಿಗಿ, ಕಡಬು ,ರೊಟ್ಟಿ ,ಪುಂಡಿಪಲ್ಯ, ಚಿತ್ರಾನ್ನ , ಅನ್ನ ಸಾರು, ಅವರು ಕುಳಿತ ನಿಂತ ಬಂಡೆ ಜಾಗವನ್ನು ತೊಳೆದು ಬಂಡೆಯ ಮೇಲೆಯೇ ಎಲ್ಲರೂ ಊಟ ಮಾಡಿದರು. ತಾಟು, ಪ್ಲೇಟ್, ಬಾಳೆಎಲೆ ,ಪತ್ರೋಳಿ, ಚಮಚ ಯಾವದೂ ಇಲ್ಲ. ಇದೊಂದು ವಿಶಿಷ್ಟ ವಿಶೇಷವಾದ ಜಾತ್ರೆ. ಮನೆಯಿಂದ ಬರುವಾಗಲೇ ಎಲ್ಲರ ತಲೆ ಮೇಲೆ ಬುತ್ತಿಯ ಗಂಟು ಕೈಯಲ್ಲಿ ಪ್ಲಾಸ್ಟಿಕ ಕೊಡದೊಂದಿಗೆ ಬರುವರು. ರಥೋತ್ಸವ ಮುಗಿದ ನಂತರ ಬಂಡೆಮೇಲೆ ಊಟ ಪ್ರಾರಂಭ.
ಸುಮಾರು ಒಂದು ತಿಂಗಳುಗಳ ಕಾಲ ಈ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಪುಂಡಿಪಲ್ಯ ಊಟ ಮಾಡಿರುವುದಿಲ್ಲ. ಇಂದೇ ತಿಂಗಳ ನಂತರ ಮತ್ತೆ ವಿಶೇಷ ಪುಂಡಿ ಪಲ್ಯ ರೊಟ್ಟಿ ಊಟ ದೇವರ ಸನ್ನಿಧಿಯಲ್ಲಿಯೇ ನೆರವೇರುವದು.ಮನೆಯಿಂದ ಊಟ ತರದವರಿಗಾಗಿ ಸಮಿತಿವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಿಸಲಾಗಿತ್ತು.
-ಗುರುರಾಜ.ಕೆ.ಪಟ್ಟಣಶೆಟ್ಟಿ





























