Home ಜಿಲ್ಲೆ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿಲ್ಲಾಧಿಕಾರಿ

ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿಲ್ಲಾಧಿಕಾರಿ

ಯಾದಗಿರಿ: ಜಿಲ್ಲಾಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಅವರು ಯಾದಗಿರಿ ತಾಲ್ಲೂಕಿನ ಮುದ್ನಾಳ ಹಾಗೂ ಹೊನಗೇರಾ ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳೊಂದಿಗೆ ಕುಳಿತು ಸವಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯುವುದು ಆರೋಗ್ಯಕರ ಬೆಳವಣಿಗೆ ಹಾಗೂ ಉತ್ತಮ ಕಲಿಕೆಗೆ ಅತ್ಯಗತ್ಯ ಎಂದರು. ಶಾಲೆಯಲ್ಲಿ ನೀಡುವ ಮೊಟ್ಟೆಯನ್ನು ಎಲ್ಲ ಮಕ್ಕಳು ಸೇವಿಸುವಂತೆ ಸಲಹೆ ನೀಡಿದರು.

ನಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ವಿಶ್ಲೇಷಿಸಿ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರಿಸುವ ವಿಧಾನ, ಸಮಯ ನಿರ್ವಹಣೆ ಹಾಗೂ ನಿರಂತರ ಅಭ್ಯಾಸದ ಮಹತ್ವವನ್ನು ವಿವರಿಸಿದರು.

“೬೨೫ಕ್ಕೆ ೬೨೫ ಅಂಕ ಗಳಿಸುವ ಗುರಿ ಇಟ್ಟುಕೊಂಡು ಶ್ರಮಿಸಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶೇ.೮೦ಕ್ಕಿಂತ ಹೆಚ್ಚು ಅಂಕ ಗಳಿಸುವ ಗುರಿ ಹೊಂದಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಮುದ್ನಾಳ ಸರ್ಕಾರಿ ಪ್ರೌಢಶಾಲೆ ಕಳೆದ ವರ್ಷ ಶೇ.೧೦೦ರಷ್ಟು ಫಲಿತಾಂಶ ಸಾಧಿಸಿರುವುದನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಚೆನ್ನಬಸಪ್ಪ ಮುಧೋಳ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಚೆನ್ನಪ್ಪ ಕಲ್ಮನಿ, ಎಸ್‌ಡಿಎಂಸಿ ಅಧ್ಯಕ್ಷರಾದ ಹಣಮಂತರೆಡ್ಡಿ ಹಾಗೂ ಸಾಬಣ್ಣ ಪೂಜಾರಿ, ಮುಖ್ಯಗುರು ಗ್ಯಾನಪ್ಪ ದಾಸನ್ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.