
ಬೆಂಗಳೂರು, ನ.೭:ರಾಜ್ಯದ ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಮಾಡಲಾಗಿದೆ. ಕೆಲವು ಮಾದರಿಗಳಲ್ಲಿ ಎಥನಾಲ್ ಪ್ರಮಾಣ ಶೇ.೩೧.೨ರಷ್ಟು ದಾಖಲಾಗಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ತಳ್ಳಿಹಾಕಿವೆ.
ರಾಜ್ಯ ಸರ್ಕಾರ ನಡೆಸಿದ ಪರೀಕ್ಷೆಗಳು ನಿಗದಿತ ಕಾನೂನುಬದ್ಧ ಮತ್ತು ತಾಂತ್ರಿಕ ವಿಧಾನಗಳನ್ನು ಅನುಸರಿಸಿಲ್ಲ. ಹೀಗಾಗಿ ಪರೀಕ್ಷಾ ವರದಿಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳಿವೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಸಿಎಲ್) ಶುಕ್ರವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ಆರೋಪಗಳಿಗೆ ಪ್ರತಿಕ್ರಿಯಿಸಿವೆ.
ರಾಜ್ಯದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯನ್ನು ಗಮನಿಸಿದ್ದೇವೆ. ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಶೇ.೨೬ರಿಂದ ಶೇ.೩೧ರವರೆಗೆ ಎಥನಾಲ್ ಮಿಶ್ರಣವಾಗಿದೆ ಎಂಬ ವರದಿಗಳು ಸರಿಯಾದ ಪರೀಕ್ಷಾ ವಿಧಾನವನ್ನು ಆಧರಿಸಿಲ್ಲ ಎಂದು ಕಂಪನಿಗಳು ಹೇಳಿವೆ.
ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್ನಲ್ಲಿ ನಿಗದಿತ ಶೇ.೨೦ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿದ್ದರು.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಜಿಲ್ಲೆಗಳ ವಿವಿಧ ಪೆಟ್ರೋಲ್ ಬಂಕ್ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಕೆಲವು ಮಾದರಿಗಳಲ್ಲಿ ಎಥನಾಲ್ ಪ್ರಮಾಣ ಶೇ.೩೧.೨ರವರೆಗೆ ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸರ್ಕಾರ ಒತ್ತಾಯಿಸಿತ್ತು.
ಸೆಪ್ಟೆಂಬರ್ ಪರೀಕ್ಷೆಗೂ ಅಕ್ಟೋಬರ್ ಪರೀಕ್ಷೆಗೂ ವ್ಯತ್ಯಾಸ ಇದಕ್ಕೆ ಪ್ರತಿಕ್ರಿಯಿಸಿರುವ ತೈಲ ಕಂಪನಿಗಳು, ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿಯೂ ಪೂರೈಕೆ ಮಾಡುತ್ತಿರುವ ಇ೨೦ ಪೆಟ್ರೋಲ್ ಭಾರತೀಯ ಮಾನದಂಡಗಳ ಬ್ಯೂರೊ (ಬಿಐಎಸ್) ರೂಪಿಸಿರುವ ಐಎಸ್ ೧೭೦೨೧ ಮಾನದಂಡಕ್ಕೆ ಅನುಗುಣವಾಗಿದೆ ಎಂದು ಹೇಳಿವೆ.
೨೦೨೬ರ ಸೆಪ್ಟೆಂಬರ್ನಲ್ಲಿ ನಡೆಸಿದ ಪರೀಕ್ಷೆಯ ಮಾದರಿಗಳನ್ನು ರಾಜ್ಯಮಟ್ಟದ ತೈಲ ಕಂಪನಿಗಳ ಸಂಯೋಜಕರ ಮೂಲಕ ಸಂಬಂಧಪಟ್ಟ ಕಂಪನಿಗಳ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್ಲೈನ್ಸ್-೨೦೨೪ (ಎಂಡಿಜಿ) ಅಡಿಯಲ್ಲಿ ಸೂಚಿಸಿರುವ ಗುಣಮಟ್ಟದ ಅಂಶಗಳನ್ನೂ ಪರೀಕ್ಷಿಸಲಾಗಿತ್ತು ಎಂದು ತಿಳಿಸಿವೆ.
ಆದರೆ, ಅಕ್ಟೋಬರ್ನಲ್ಲಿ ನಡೆಸಿದ ಪರೀಕ್ಷೆಯ ಸಂದರ್ಭದಲ್ಲಿ ತೈಲ ಕಂಪನಿಗಳ ಪ್ರತಿನಿಧಿಗಳ ಭಾಗವಹಿಸುವಿಕೆ ಇಲ್ಲದೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂಬುದು ಕಂಪನಿಗಳ ಆಕ್ಷೇಪವಾಗಿದೆ.
೨೦೦೫ರ ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಪೂರೈಕೆ, ವಿತರಣೆ ಮತ್ತು ಅಕ್ರಮ ತಡೆ) ನಿಯಂತ್ರಣ ಆದೇಶ ಹಾಗೂ ೨೦೨೪ರ ಮಾರ್ಕೆಟಿಂಗ್ ಡಿಸಿಪ್ಲಿನ್ ಮಾರ್ಗಸೂಚಿಗಳ ಪ್ರಕಾರ ಪೆಟ್ರೋಲ್ ಮಾದರಿ ಸಂಗ್ರಹ, ಸಂರಕ್ಷಣೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಿಸುವುದಕ್ಕೆ ನಿರ್ದಿಷ್ಟ ನಿಯಮಗಳಿವೆ ಎಂದು ಒಎಂಸಿಗಳು ವಿವರಿಸಿವೆ.
ಈ ನಿಯಮಗಳ ಪ್ರಕಾರ ಪ್ರತಿಯೊಂದು ಮಾದರಿ ಸಂಗ್ರಹಿಸುವಾಗ ಒಟ್ಟು ಆರು ಲೀಟರ್ ಸಾಮರ್ಥ್ಯದ ಆರು ಪ್ರತ್ಯೇಕ ಒಂದು ಲೀಟರ್ ಮಾದರಿಗಳನ್ನು ಪಡೆಯಬೇಕು.
ಎರಡು ಮಾದರಿಗಳನ್ನು ಬಂಕ್ ಮಾಲೀಕರಿಗೆ ಹಸ್ತಾಂತರಿಸಬೇಕು.ಎರಡು ಮಾದರಿಗಳನ್ನು ತೈಲ ಕಂಪನಿ ಅಥವಾ ಸಂಬಂಧಪಟ್ಟ ಇಲಾಖೆಯು ಸಂರಕ್ಷಿಸಬೇಕು. ಉಳಿದ ಎರಡು ಮಾದರಿಗಳನ್ನು ನಿಯಂತ್ರಣ ಆದೇಶದ ಶೆಡ್ಯೂಲ್-೩ರಲ್ಲಿ ಸೂಚಿಸಿರುವ ಅಥವಾ ಅಧಿಕೃತ ಅಧಿಸೂಚನೆ ಮೂಲಕ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಬೇಕು.
ಮಾದರಿಗಳ ಮೇಲಿನ ಲೇಬಲ್ಗಳಿಗೆ ಸಂಬಂಧಪಟ್ಟ ಎಲ್ಲರ ಸಹಿ ಇರಬೇಕು. ಪರೀಕ್ಷಾ ಫಲಿತಾಂಶಗಳನ್ನು ನಿಗದಿತ ಅವಧಿಯೊಳಗೆ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ತೈಲ ಕಂಪನಿಗಳಿಗೆ ತಿಳಿಸಬೇಕು. ಈ ಪ್ರಕ್ರಿಯೆ ಪಾಲಿಸುವುದರಿಂದ ಪರೀಕ್ಷೆಯ ಪಾರದರ್ಶಕತೆ ಮತ್ತು ಫಲಿತಾಂಶಗಳ ದೃಢೀಕರಣ ಸಾಧ್ಯವಾಗುತ್ತದೆ ಎಂದು ಕಂಪನಿಗಳು ಹೇಳಿವೆ.ಮರುಪರೀಕ್ಷೆಗೆ ಅವಕಾಶ ನೀಡಿಲ್ಲ ಎಂದು ತೈಲ ಕಂಪನಿಗಳು ಹೇಳಿವೆ.
ಅಕ್ಟೋಬರ್ನಲ್ಲಿ ಸಂಗ್ರಹಿಸಿದ ಮಾದರಿಗಳಿಗೆ ಸಂಬಂಧಿಸಿದಂತೆ ಸಂರಕ್ಷಿತ ಮಾದರಿಗಳು, ಪೆಟ್ರೋಲ್ ಬಂಕ್ವಾರು ಸಂಪೂರ್ಣ ವಿವರಗಳು ಹಾಗೂ ಪ್ರಯೋಗಾಲಯದ ವರದಿಗಳನ್ನು ತಮಗೆ ನೀಡಿಲ್ಲ ಎಂದು ಕಂಪನಿಗಳು ಆರೋಪಿಸಿವೆ.
ಈ ದಾಖಲೆಗಳನ್ನು ರಾಜ್ಯಮಟ್ಟದ ಸಂಯೋಜಕರ ಮೂಲಕ ಕೇಳಿದ್ದರೂ ಅವು ಲಭ್ಯವಾಗಿಲ್ಲ. ಅಲ್ಲದೆ, ವರದಿಯಲ್ಲಿರುವ ಎಥನಾಲ್ ಪ್ರಮಾಣವನ್ನು ದೃಢೀಕರಿಸಲು ನಿಯಂತ್ರಣ ಆದೇಶದಡಿ ನಿಗದಿಪಡಿಸಿರುವ ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿಲ್ಲ. ಬದಲಾಗಿ ಖಾಸಗಿ ತೃತೀಯ ಸಂಸ್ಥೆಯ ಪ್ರಯೋಗಾಲಯ ನೀಡಿರುವ ಪ್ರಮಾಣಪತ್ರಗಳನ್ನು ಆಧರಿಸಲಾಗಿದೆ ಎಂದು ಹೇಳಿವೆ.
ಆ ಪ್ರಮಾಣಪತ್ರಗಳಲ್ಲಿ ಎಥನಾಲ್ ಪ್ರಮಾಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಅಗತ್ಯವಿರುವ ಸಂಪೂರ್ಣ ತಾಂತ್ರಿಕ ಮಾಹಿತಿಯೂ ಇಲ್ಲ ಎಂದು ಆಕ್ಷೇಪಿಸಿವೆ.ಸಂಗ್ರಹಿಸಿದ ಮಾದರಿಗಳ ಪ್ರತಿಗಳನ್ನು ತೈಲ ಕಂಪನಿಗಳು ಮತ್ತು ಬಂಕ್ ಮಾಲೀಕರಿಗೆ ನೀಡದಿರುವುದರಿಂದ ಮರುಪರೀಕ್ಷೆ ನಡೆಸಿ ಫಲಿತಾಂಶವನ್ನು ಪರಿಶೀಲಿಸುವ ಅವಕಾಶವೂ ಸಿಕ್ಕಿಲ್ಲ. ಇದರಿಂದ ಸಂಬಂಧಪಟ್ಟ ಕಂಪನಿಗಳು ಹಾಗೂ ಬಂಕ್ ಮಾಲೀಕರಿಗೆ ತಮ್ಮ ವಾದ ಮಂಡಿಸಲು ಸಾಧ್ಯವಾಗಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಿತ ಇಂಧನ ನೀತಿಯಡಿ ಪೆಟ್ರೋಲ್ನಲ್ಲಿ ಶೇ.೨೦ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಜಾರಿಗೊಳಿಸಲಾಗಿದೆ. ಆದರೆ ಕರ್ನಾಟಕದ ಕೆಲವು ಬಂಕ್ಗಳಲ್ಲಿ ಈ ಪ್ರಮಾಣವನ್ನು ಮೀರಿ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪ ಇದೀಗ ತೈಲ ಕಂಪನಿಗಳ ಆಕ್ಷೇಪದೊಂದಿಗೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಒಂದೆಡೆ ರಾಜ್ಯ ಸರ್ಕಾರ ಪರೀಕ್ಷಾ ವರದಿಗಳನ್ನು ಮುಂದಿಟ್ಟುಕೊಂಡು ಕ್ರಮಕ್ಕೆ ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ತೈಲ ಕಂಪನಿಗಳು ಪರೀಕ್ಷಾ ವಿಧಾನದ ಕಾನೂನುಬದ್ಧತೆ ಮತ್ತು ತಾಂತ್ರಿಕ ನಿಖರತೆಯನ್ನೇ ಪ್ರಶ್ನಿಸಿವೆ. ಹೀಗಾಗಿ ಮಾದರಿ ಸಂಗ್ರಹ ಮತ್ತು ಪರೀಕ್ಷಾ ಪ್ರಕ್ರಿಯೆಯ ಕುರಿತು ಉಭಯ ಪಕ್ಷಗಳ ನಡುವೆ ಸ್ಪಷ್ಟನೆ ಹಾಗೂ ದಾಖಲೆಗಳ ಪರಿಶೀಲನೆ ಅಗತ್ಯವಾಗಿದೆ.























