
ಬೆಂಗಳೂರು, ನ.೪- ನಷ್ಟದ ಹೊರೆ, ಡೀಸೆಲ್ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ಹೆಚ್ಚಳದ ನೆಪದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ. ೨೩ರಿಂದ ೩೬ರಷ್ಟು ಹೆಚ್ಚಿಸಲಾಗಿದೆ. ಇಂದೇ ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದ್ದು, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.
ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸುದ್ದಿಗೋಷ್ಠಿಯಲ್ಲಿ ದರ ಏರಿಕೆ ನಿರ್ಧಾರವನ್ನು ಪ್ರಕಟಿಸಿದರು. ಕೆಎಸ್ಆರ್ಟಿಸಿಯ ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ ರೂ. ೯ ಹಾಗೂ ವೇಗದೂತ ಸಾರಿಗೆಯಲ್ಲಿ ಗರಿಷ್ಠ ರೂ. ೧೮ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.
ಬಿಎಂಟಿಸಿಯಲ್ಲೂ ಪ್ರಯಾಣ ದುಬಾರಿ:
ಬಿಎಂಟಿಸಿ ಬಸ್ಗಳಲ್ಲಿಯೂ ಪ್ರಯಾಣ ದರ ಹೆಚ್ಚಿಸಲಾಗಿದೆ. ಕನಿಷ್ಠ ರೂ. ೬ ರಷ್ಟಿದ್ದ ದರವನ್ನು ರೂ. ೧೦ಕ್ಕೆ ಹೆಚ್ಚಿಸಲಾಗಿದೆ ಎರಡು ಕಿಲೋಮೀಟರ್ವರೆಗಿನ ಪ್ರಯಾಣಕ್ಕೆ ರೂ. ೪ ಹಾಗೂ ೨ರಿಂದ ೪ ಕಿಲೋಮೀಟರ್ ಪ್ರಯಾಣಕ್ಕೆ ರೂ. ೬ರಷ್ಟು ಹೆಚ್ಚಳವಾಗಲಿದೆ. ಬಿಎಂಟಿಸಿಯಲ್ಲಿ ಗರಿಷ್ಠ ರೂ. ೧೨ರಷ್ಟು ದರ ಏರಿಕೆಯಾಗಲಿದೆ.
ವಾಯುವಜ್ರ ಬಸ್ಗಳಲ್ಲಿ ೬ ಕಿಲೋಮೀಟರ್ವರೆಗಿನ ಪ್ರಯಾಣಕ್ಕೆ ರೂ.೫, ೬ರಿಂದ ೧೮ ಕಿಲೋಮೀಟರ್ವರೆಗಿನ ಪ್ರಯಾಣಕ್ಕೆ ರೂ. ೧೦ ಹಾಗೂ ದೂರದ ಪ್ರಯಾಣಕ್ಕೆ ರೂ. ೧೫ರಷ್ಟು ಹೆಚ್ಚಳವಾಗಲಿದೆ. ಕೆಎಸ್ಆರ್ಟಿಸಿಯಲ್ಲಿ ಸುಮಾರು ೧೫೦ ಸ್ಟೇಜ್ಗಳ ಆಧಾರದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.
ಡೀಸೆಲ್, ವೇತನದ ವೆಚ್ಚ ಹೆಚ್ಚಳ
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದ ಸಚಿವರು, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು ೨೬,೧೨೫ ಬಸ್ಗಳಿದ್ದು, ೧,೦೩,೬೪೬ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ೨೪,೧೭೯ ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದು, ಸುಮಾರು ೧.೨೪ ಕೋಟಿ ಪ್ರಯಾಣಿಕರು ಸಾರಿಗೆ ಸೇವೆ ಬಳಸುತ್ತಿದ್ದಾರೆ ಎಂದರು.
ಕಳೆದ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ, ಟೈರ್ ಬೆಲೆ ಹಾಗೂ ಬಸ್ಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಕಳೆದ ಹತ್ತು ವರ್ಷಗಳಲ್ಲಿ ಡೀಸೆಲ್ ಬೆಲೆ ಲೀಟರ್ಗೆ ಸುಮಾರು ರೂ. ೯೮ಕ್ಕೆ ತಲುಪಿದ್ದು, ಶೇ. ೧೦.೪೭ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ನಿಗಮಗಳ ಒಟ್ಟು ವೆಚ್ಚದ ಶೇ. ೮೦ರಷ್ಟು ಹಣ ಡೀಸೆಲ್ ಖರೀದಿ ಮತ್ತು ಸಿಬ್ಬಂದಿ ವೇತನಕ್ಕೆ ವ್ಯಯವಾಗುತ್ತಿದೆ. ವಾರ್ಷಿಕವಾಗಿ ಡೀಸೆಲ್ ಖರೀದಿಗೆ ರೂ. ೫,೬೯೪ ಕೋಟಿ ವೆಚ್ಚವಾಗುತ್ತಿದ್ದು, ಬೆಲೆ ಏರಿಕೆಯಿಂದಲೇ ನಿಗಮಗಳಿಗೆ ವರ್ಷಕ್ಕೆ ಸುಮಾರು ರೂ. ೫೦೦ ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ತಿಳಿಸಿದರು.
ಡೀಸೆಲ್ ಪೂರೈಕೆಗೆ ರೂ.೧,೧೧೧.೮೮ ಕೋಟಿ ಬಾಕಿ ಪಾವತಿಸಬೇಕಿದೆ. ೨೦೨೪ರಲ್ಲಿ ನೌಕರರ ವೇತನ ಹೆಚ್ಚಳ ಮಾಡಲಾಗಿದ್ದು, ಅದರಿಂದಲೂ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದರು.
ರೂ. ೧೬ ಸಾವಿರ ಕೋಟಿ ವೆಚ್ಚ, ರೂ.೧೪ ಸಾವಿರ ಕೋಟಿ ಆದಾಯ:
ನಾಲ್ಕೂ ಸಾರಿಗೆ ನಿಗಮಗಳು ವರ್ಷಕ್ಕೆ ಒಟ್ಟು ರೂ. ೧೬ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಆದಾಯ ಸಂಗ್ರಹ ಸುಮಾರು ರೂ. ೧೪ ಸಾವಿರ ಕೋಟಿ ಮಾತ್ರವಾಗಿದೆ. ಇದರಿಂದ ಪ್ರತಿವರ್ಷ ಸುಮಾರು ರೂ. ೨ ಸಾವಿರ ಕೋಟಿ ಕೊರತೆ ಉಂಟಾಗುತ್ತಿದೆ ಎಂದು ಸಚಿವರು ವಿವರಿಸಿದರು.
ನಿಗಮಗಳ ಸಾಲದ ಹೊರೆ, ಬಾಕಿ ಪಾವತಿಗಳು ಹಾಗೂ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿದೆ. ೨೦೨೧ರಲ್ಲಿ ಶ್ರೀನಿವಾಸ ಮೂರ್ತಿ ಸಮಿತಿ ಕಾಲಕಾಲಕ್ಕೆ ಟಿಕೆಟ್ ದರ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಕಳೆದ ವರ್ಷ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿಯೂ ಸಮಗ್ರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಈಗ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಜನವರಿ ೨೦೨೫ರಲ್ಲಿ ಕೊನೆಯ ಬಾರಿ ದರ ಹೆಚ್ಚಳ ಮಾಡಲಾಗಿತ್ತು. ಡೀಸೆಲ್ ಬೆಲೆ, ವೇತನ ಹಾಗೂ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯ ದರದಲ್ಲಿ ಸೇವೆ ಮುಂದುವರಿಸುವುದು ಕಷ್ಟವಾಗಿದೆ ಎಂದು ಹೇಳಿದರು.
ಬೆಂಗಳೂರು ಪ್ರಯಾಣಿಕರಿಗೆ ದರ ಏರಿಕೆ ಬಿಸಿ:
ಹೊಸ ದರದ ಪ್ರಕಾರ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣ ದರ ಹೀಗಿದೆ:
ಬೆಂಗಳೂರು- ನೆಲಮಂಗಲ: ೩೫ರಿಂದ -೪೪ಕ್ಕೆ ಏರಿಕೆ.
ಬೆಂಗಳೂರು- ಕೋಲಾರ: ೮೧ರಿಂದ -೧೦೦ಕ್ಕೆ ಏರಿಕೆ.
ಬೆಂಗಳೂರು- ಚಿಕ್ಕಮಗಳೂರು: ೨೯೫ರಿಂದ -೩೬೩ಕ್ಕೆ ಏರಿಕೆ.
ಮೆಜೆಸ್ಟಿಕ್- ಶಿವಾಜಿನಗರ: ೧೨ರಿಂದ -೧೮ಕ್ಕೆ ಏರಿಕೆ.
ಮೆಜೆಸ್ಟಿಕ್- ಯಶವಂತಪುರ: ೧೮ರಿಂದ -೨೫ಕ್ಕೆ ಏರಿಕೆ.
ಶಕ್ತಿ ಯೋಜನೆಗೆ ಸರ್ಕಾರದ ಹಣ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಷ್ಟವಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಗಮಗಳು ಉಚಿತವಾಗಿ ಸೇವೆ ನೀಡುತ್ತಿಲ್ಲ; ಯೋಜನೆಯಡಿ ಮಹಿಳೆಯರು ಪ್ರಯಾಣಿಸುವುದಕ್ಕೆ ಸರ್ಕಾರವೇ ನಿಗಮಗಳಿಗೆ ಹಣ ಪಾವತಿಸುತ್ತಿದೆ ಎಂದರು.
ಶಕ್ತಿ ಯೋಜನೆಯಡಿ ನಿಗಮಗಳಿಗೆ ಬರಬೇಕಿರುವ ಹಣ ಸೇರಿದಂತೆ ಸರ್ಕಾರದಿಂದ ಬಾಕಿ ಇರುವ ಮೊತ್ತವನ್ನು ಹಂತ ಹಂತವಾಗಿ ಪಾವತಿಸುವುದಾಗಿ ತಿಳಿಸಲಾಗಿದೆ. ಸಾರಿಗೆ ನಿಗಮಗಳು ಆರ್ಥಿಕವಾಗಿ ಸುಸ್ಥಿರವಾಗಿರಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವ ಭೈರತಿ ಸುರೇಶ್ ಸಮರ್ಥಿಸಿಕೊಂಡರು.
ಒಟ್ಟಾರೆ, ಇಂದಿನ ಮಧ್ಯರಾತ್ರಿಯಿಂದ ಜಾರಿಗೆ ಬರಲಿರುವ ಹೊಸ ದರಗಳು ರಾಜ್ಯದ ಸಾರ್ವಜನಿಕ ಸಾರಿಗೆ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ತರಲಿವೆ.ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
























