
ಬೆಂಗಳೂರು, ನ. ೫- ಎಸ್ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಂಡಿಯಾ ಒಕ್ಕೂಟ ಬೆಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ “ಮತ ಉಳಿಸಿ ದೇಶ ಉಳಿಸಿ” ಎಂಬ ಘೋಷ ವಾಕ್ಯದಡಿ ನಡೆದ ಈ ಪ್ರತಿಭಟನಾ ರ್ಯಾಲಿಯಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಸಿಪಿಐಎಲ್, ಆರ್ಜೆಡಿ, ಎನ್ಸಿಪಿ (ಎಸ್ಪಿ), ಸಮಾಜವಾದಿ ಪಕ್ಷ, ಎಂಡಿಎಂಕೆ, ಜಿಕೆಎನ್ಸಿ, ಎಐಟಿಸಿ, ಆರ್ಪಿಐ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರುಗಳು ಭಾಗಿಯಾಗಿ ಎಸ್ಐಆರ್ನ್ನು ರದ್ದುಗೊಳಿಸಿ ಸಿಇಸಿ ಜ್ಞಾನೇಶ್ಕುಮಾರ್ ರಾಜೀನಾಮೆ ನೀಡಬೇಕು ಎಂದು ಹಕ್ಕೋತ್ತಾಯ ಮಂಡಿಸಿದವು.
ಈ ಪ್ರತಿಭಟನಾ ರ್ಯಾಲಿಯಲ್ಲಿ ಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಸ್ಐಆರ್ ರದ್ದು ಮಾಡಬೇಕು. ಜ್ಞಾನೇಶ್ಕುಮಾರ್ ರಾಜೀನಾಮೆ ನೀಡಬೇಕು. ಎಸ್ಐಆರ್ ಪಟ್ಟಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.
ಈ ಪ್ರತಿಭಟನಾ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಎಂ.ಬಿ. ಪಾಟೀಲ್, ಯತೀಂದ್ರ ಸಿದ್ದರಾಮಯ್ಯ, ಸೇರಿದಂತೆ ಹಲವು ಸಚಿವರು, ಶಾಸಕರು, ನಟ ಪ್ರಕಾಶ್ ರಾಜ್, ಸಿಪಿಐನ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಪ್ರಕಾಶ್, ಫಾರ್ವಡ್ ಬ್ಲಾಕ್ ಅಧ್ಯಕ್ಷ ಶಿವಶಂಕರ್, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ, ಸರ್ವೋದಯ ಕರ್ನಾಟಕ ಬಡಗಲಪುರ ನಾಗೇಂದ್ರ, ರಿಪಬ್ಲಿಕ್ ಪಾರ್ಟಿಯ ಆಫ್ ಇಂಡಿಯಾದ ಆರ್. ಮೋಹನ್ರಾಜ್, ದಲಿತ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಇಂದೂಧರ್ ಹೊನ್ನಾಪುರ, ಎದ್ದೇಳು ಕನ್ನಡದ ಅಧ್ಯಕ್ಷ ನೂರ್ ಶ್ರೀಧರ್, ಕಾಕ್ರೋಜ್ ಜನತಾ ಪಾರ್ಟಿಯ ರಾಹುಲ್, ಸರ್ವೋದಯ ಕರ್ನಾಟಕ ವೀರಸಂಗಯ್ಯ, ಸಮಾಜವಾದಿ ಪಕ್ಷದ ಜಯರಾಮರೆಡ್ಡಿ, ಸಿಪಿಐ(ಎಂ)ನ ಕೆ.ಎಸ್. ವಿಮಲಾ ಸೇರಿದಂತೆ ಇಂಡಿ ಒಕ್ಕೂಟದ ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.
ಡಿಕೆಶಿ ವಾಗ್ದಾಳಿ
ಈ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಸ್ಐಆರ್ ವಿರುದ್ಧ ಚುನಾವಣಾ ಆಯೋಗಕ್ಕೆ ಹೋಗಲು ನಮಗೆ ಅವಕಾಶ ನೀಡಿಲ್ಲ. ಮತದಾರರ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಚುನಾವಣಾ ಆಯೋಗ ಮತಗಳ್ಳತನಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ದೇಶದ ಐತಿಹಾಸಿಕ ಹೋರಾಟಕ್ಕೆ ಫ್ರೀಡಂ ಪಾರ್ಕ್ ಸಾಕ್ಷಿಯಾಗಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ರಣಕಹಳೆ ಆರಂಭವಾಗಿದೆ. ದೇಶದಲ್ಲಿ ಯಾವ ರೀತಿ ಮತಚೋರಿ ನಡೆಯುತ್ತಿದೆ ಎಂಬುದನ್ನು ತೋರಿಸಿದ್ದೇವೆ. ನಮ್ಮ ರಾಜ್ಯ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡುತ್ತದೆ ಎಂದು ಹೇಳಿದರು.
ಲಕ್ಷಾಂತರ ಜನ ಇಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದೇವೆ. ಸಿಇಸಿ ಜ್ಞಾನೇಶ್ಕುಮಾರ್ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಈ ಹೋರಾಟಕ್ಕೆ ಭಾಗಿಯಾದವರ ಜತೆ ಸರ್ಕಾರ ಇರುತ್ತದೆ. ೨೦೨೮ ಕ್ಕೆ ರಾಜ್ಯದಲ್ಲಿ, ೨೦೨೯ಕ್ಕೆ ದೇಶದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಪ್ರಕಾಶ್ರಾಜ್ ವಾಗ್ದಾಳಿ
ಈ ಪ್ರತಿಭಟನೆ ರ್ಯಾಲಿಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಈ ಪ್ರತಿಭಟನೆ ಮೊದಲೇ ಆಗಬೇಕಿತ್ತು. ಕೊಂಕಣಸುತ್ತಿ ಮೈಲಾರಕ್ಕೆ ಬಂದ ಮೇಲೆ ಪ್ರತಿಭಟನೆ ಆಗುತ್ತಿದೆ. ವಿರೋಧ ಪಕ್ಷಗಳು ಎಲ್ಲ ಸೇರಿ ಹೋರಾಟ ಮಾಡಬೇಕಿದೆ. ಕರ್ನಾಟಕದಲ್ಲಿ ಎಸ್ಐಆರ್ ವಿರೋಧಿಸದಿದ್ದರೆ ಕರ್ನಾಟಕ ಇನ್ನೊಂದು ಪಶ್ಚಿಮಬಂಗಾಳ ಆಗಲಿದೆ ಎಂದು ಹೇಳಿದರು.
ದೇಶವನ್ನು ಮನಸ್ಪೂರ್ತಿ ಬಿಜೆಪಿಯಿಂದ ರಕ್ಷಣೆ ಮಾಡಬೇಕಿದೆ. ಎಸ್ಐಆರ್ ತೆಗೆಯುವ ನಿತ್ಯ ಹೋರಾಟವನ್ನು ಮಾಡಬೇಕಿದೆ ಎಂದು ಹೇಳಿದರು
ಎಸ್ಐಆರ್ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ವೇದಿಕೆಯಾಗಿದೆ. ನಾವು ಮುಂದಿನ ಎರಡು ವರ್ಷ ಹಳ್ಳಿ ಹಳ್ಳಿಗೆ ಹೋಗುತ್ತೇವೆ. ಬೂತ್ ಬೂತ್ಗಳಿಗೆ ಹೋಗಿ ಪರಿಶೀಲನೆ ಮಾಡುತ್ತೇವೆ ಎಂದರು .
ಎಸ್ಐಆರ್ನ್ನು ಕರ್ನಾಟಕದಲ್ಲಿ ಬಹಿಷ್ಕಾರ ಮಾಡಬೇಕು. ಜ್ಞಾನೇಶ್ಕುಮಾರ್ ಹಿಂದೆ ಮೋದಿ, ಅಮಿತ್ ಶಾ ಇದ್ದಾರೆ ಎಂದು ದೂರಿದರು.
ಹರಿಪ್ರಸಾದ್ ಭಾಷಣ
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಎಸ್ಐರ್ ವಿರುದ್ಧ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತೇವೆ. ಇಂಡಿ ಒಕ್ಕೂಟ ಪ್ರತಿಭಟನೆ ನಡೆಸಲಿದೆ ಎಂದರು.
ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ಪ್ರಯತ್ನದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಭಾರತವನ್ನು ಸರ್ವಾಧಿಕಾರಿ ನೆಲೆಗಟ್ಟಿಗೆ ಪರಿವರ್ತಿಸುವ ಹಾಗೂ ಕೋಮುವಾದಿ ಹಿಂದೂತ್ವ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ಬಿಜೆಪಿ ಪ್ರಯತ್ನಕ್ಕೆ ನಾವು ಅವಕಾಶ ಕೊಡಲ್ಲ. ಇಂಡಿ ಪಕ್ಷಗಳು ಒಂದಾಗಿ, ಒಗ್ಗಟ್ಟಾಗಿ ಹೋರಾಟ ನಡೆಸಲಿವೆ ಎಂದರು.
ಮುಗಿಲು ಮುಟ್ಟಿದ ಘೋಷಣೆ ಭಿತ್ತಿಪತ್ರ ಪ್ರದರ್ಶನ
ಈ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಕಾರ್ಯಕರ್ತರು ಮತ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಗಳನ್ನು ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದರು.
ಹಾಗೆಯೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ಶಾ ವಿರುದ್ಧವೂ ಧಿಕ್ಕಾರದ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.























