
ಬೆಂಗಳೂರು, ನ. ೬- ಪತ್ನಿಯೊಂದಿಗಿನ ಕೌಟುಂಬಿಕ ಕಲಹ ಹಾಗೂ ಆಕೆಯ ತವರು ಮನೆಯವರ ಮೇಲಿನ ದ್ವೇಷಕ್ಕೆ ಇಡೀ ಕುಟುಂಬವನ್ನೇ ಬಲಿಪಡೆದಿರುವ ಭೀಕರ ಸಾಮೂಹಿಕ ಹತ್ಯಾಕಾಂಡ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಭೀವತ್ಸ ಹತ್ಯಾಕಾಂಡದಲ್ಲಿ ಆರೋಪಿಯ ೧೭ ವರ್ಷದ ಮಗಳ ಪಾತ್ರವೂ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಾಗಿದ್ದ ಇಂದುಶೇಖರ್, ಸುಮಾರು ೨೦ ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ. ಇತ್ತೀಚಿನ ವರ್ಷಗಳಲ್ಲಿ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸುನೀತಾ ತನ್ನ ತಾಯಿ ರೂಪವತಿ ಹಾಗೂ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದು, ದಾಂಪತ್ಯ ಕಲಹದ ಸಂದರ್ಭದಲ್ಲೆಲ್ಲ ತವರು ಮನೆಯವರು ಆಕೆಯ ಬೆಂಬಲಕ್ಕೆ ನಿಲ್ಲುತ್ತಿದ್ದರು. ಇದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಇಂದುಶೇಖರ್, ಪತ್ನಿಯ ಕುಟುಂಬದವರೇ ತನ್ನ ಸಂಸಾರ ಹಾಳು ಮಾಡುತ್ತಿದ್ದಾರೆ ಎಂದು ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಪೂರ್ವಯೋಜಿತ ಸಂಚಿನಂತೆ ಮೊದಲು ಪತ್ನಿ ಸುನೀತಾಳನ್ನು ಮನೆಯಲ್ಲೇ ಮಸಾಲೆ ಅರೆಯುವ ರುಬ್ಬುಗುಂಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಆಕೆಯ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆದು, ಸುನೀತಾ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ನೆರೆಹೊರೆಯವರಿಗೆ ಸುಳ್ಳು ಮಾಹಿತಿ ನೀಡಿರುವ ಅಂಶ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರ.
ನಂತರ ಮದ್ಯದ ಪಾರ್ಟಿ ನೆಪದಲ್ಲಿ ಭಾಮೈದರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ. ಆ ಬಳಿಕ ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ, ಅತ್ತೆ ರೂಪವತಿ ಹಾಗೂ ಏಳು ವರ್ಷದ ಬಾಲಕ ಪುನೀತ್ನನ್ನೂ ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿ ಕೊಲೆ ಮಾಡಿದ್ದಾನೆ ಎಂಬ ಆರೋಪವಿದೆ.
ಹೀಗೆ ಪತ್ನಿ ಸುನೀತಾ, ಅತ್ತೆ ರೂಪವತಿ, ಭಾಮೈದರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಪುನೀತ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಲಿಪಡೆದಿರುವುದು ಪ್ರಕರಣದ ಭೀಕರತೆಯನ್ನು ಹೆಚ್ಚಿಸಿದೆ.
ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಗೋಣಿಚೀಲಗಳಲ್ಲಿ ತುಂಬಿ ಕಾರಿನ ಮೂಲಕ ವಿವಿಧ ನಿರ್ಜನ ಪ್ರದೇಶಗಳಿಗೆ ಸಾಗಿಸಿ ಎಸೆದಿದ್ದಾನೆ ಎನ್ನಲಾಗಿದೆ. ನಂದಿಬೆಟ್ಟ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಮೃತದೇಹಗಳನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಚಾರ್ಮಾಡಿಘಾಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗುರುವಾರ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಸುಮಾರು ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ನಂದಿಬೆಟ್ಟದ ಸಮೀಪ ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ಪತ್ತೆಯಾಗಿದೆ. ಉಳಿದ ಆರು ಮಂದಿಯ ಮೃತದೇಹಗಳಿಗಾಗಿ ಪೊಲೀಸರು ವಿವಿಧ ಪ್ರದೇಶಗಳಲ್ಲಿ ಶೋಧ ಮುಂದುವರಿಸಿದ್ದಾರೆ.
ಈ ಪ್ರಕರಣದಲ್ಲಿ ಹತ್ಯೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ೧೩ ವರ್ಷದ ಬಾಲಕ ಪೊಲೀಸರಿಗೆ ನೀಡಿರುವ ಮಾಹಿತಿ ಮತ್ತಷ್ಟು ಆತಂಕ ಮೂಡಿಸಿದೆ. ಈತ ಮೃತ ಸುನೀತಾಳ ಅಣ್ಣನ ಮಗನಾಗಿದ್ದು, ಕಳೆದ ಐದಾರು ದಿನಗಳಿಂದ ಆರೋಪಿ ಮತ್ತು ಆತನ ಕುಟುಂಬದವರೊಂದಿಗೆ ಕಾರಿನಲ್ಲಿ ವಿವಿಧ ಪ್ರವಾಸಿ ಸ್ಥಳಗಳಿಗೆ ತೆರಳಿದ್ದ ಎನ್ನಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿ ಸೇರಿದಂತೆ ಹಲವು ಕಡೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಯ ೧೭ ವರ್ಷದ ಮಗಳೂ ಜೊತೆಯಲ್ಲಿದ್ದಳು ಎಂದು ಬಾಲಕ ಹೇಳಿದ್ದಾನೆ.
ಕಾರಿನ ಡಿಕ್ಕಿಯಲ್ಲಿ ಗೋಣಿಚೀಲಗಳನ್ನು ಇಟ್ಟಿದ್ದರು. ಅವುಗಳಿಂದ ಕೆಟ್ಟ ವಾಸನೆ ಬರುತ್ತಿತ್ತು. ಮುಟ್ಟಲು ಹೋದಾಗ ಮುಟ್ಟಬೇಡ ಎಂದು ತಡೆಯುತ್ತಿದ್ದರು. ಒಂದು ಬಾರಿ ಕಾರಿನ ಡಿಕ್ಕಿ ತೆರೆದಾಗ ಬೈದು ಮುಚ್ಚಿಸಿದ್ದರು. ರಸ್ತೆಯಲ್ಲಿ ವಾಹನಗಳು ಓಡಾಡದ, ಜನರಿಲ್ಲದ ಸ್ಥಳಗಳನ್ನು ನೋಡಿಕೊಂಡು ಗೋಣಿಚೀಲಗಳನ್ನು ಎಸೆಯುತ್ತಿದ್ದರು. ನಾಲ್ಕು ಮೃತದೇಹಗಳಿದ್ದ ಚೀಲಗಳನ್ನು ಎಸೆಯುವುದನ್ನು ತಾನು ನೋಡಿದ್ದೇನೆ ಎಂದು ಬಾಲಕ ವಿವರಿಸಿದ್ದಾನೆ ಎನ್ನಲಾಗಿದೆ.
ಇಂದು ರಾತ್ರಿ ಅಮ್ಮ ಮತ್ತು ಅಪ್ಪ ಮನೆಯಲ್ಲಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಅಪ್ಪ ಇರಲಿಲ್ಲ. ಅಪ್ಪನನ್ನು ಹುಡುಕಿಕೊಂಡು ಅಮ್ಮ ಹೊರಗೆ ಹೋದಾಗ ತಾನೂ ಹಿಂಬಾಲಿಸಲು ಮುಂದಾಗಿದ್ದೆ. ಆದರೆ ಅಕ್ಕ ತನ್ನನ್ನು ತಡೆದು ಮನೆಯೊಳಗೆ ಎಳೆದುಕೊಂಡು ಬಂದಳು. ಎಲ್ಲರ ಮೊಬೈಲ್ ಫೋನ್ಗಳು ಅವರ ಬಳಿಯೇ ಇದ್ದವು. ಅಪ್ಪ ಮತ್ತು ಅಕ್ಕ ಗುಸುಗುಸು ಮಾತನಾಡುತ್ತಿದ್ದರು ಎಂದು ಬಾಲಕ ಹೇಳಿರುವುದಾಗಿ ತಿಳಿದುಬಂದಿದೆ.
ಆದರೆ, ತನ್ನ ತಂದೆ-ತಾಯಿ ಸೇರಿದಂತೆ ಕುಟುಂಬದವರು ಮೃತಪಟ್ಟಿದ್ದಾರೆ ಎಂಬ ಸಂಗತಿ ಈ ಬಾಲಕನಿಗೆ ಇನ್ನೂ ತಿಳಿದಿಲ್ಲ ಎನ್ನಲಾಗಿದೆ. ಬಾಲಕನ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಯ ಮಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಆಕೆ ನೆರವು ನೀಡಿದ್ದಳೇ ಅಥವಾ ಕೃತ್ಯದ ಬಗ್ಗೆ ಮೊದಲೇ ತಿಳಿದಿತ್ತೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇಂದುಶೇಖರ್ನನ್ನು ವಿಚಾರಣೆಗೊಳಪಡಿಸಿದಾಗ ಆತನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಆತನ ಮನೆ ಪರಿಶೀಲಿಸಿ ತೀವ್ರ ವಿಚಾರಣೆ ನಡೆಸಿದಾಗ ಏಳು ಮಂದಿಯ ಹತ್ಯೆಯ ರಹಸ್ಯ ಬಯಲಾಗಿದೆ.
ಹತ್ಯೆಯ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಕೃತ್ಯಕ್ಕೆ ಬಳಸಿದ್ದ ರುಬ್ಬುಗುಂಡನ್ನೂ ತೊಳೆದು ಸಾಕ್ಷ್ಯ ನಾಶಪಡಿಸಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ. ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿನ ರಕ್ತದ ಮಾದರಿಗಳು, ಕೃತ್ಯಕ್ಕೆ ಬಳಸಿದ ವಸ್ತುಗಳು ಹಾಗೂ ವಾಹನವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.
ಸುಮಾರು ಎರಡು ದಶಕಗಳ ದಾಂಪತ್ಯ ಜೀವನದಲ್ಲಿ ಉಂಟಾದ ಮನಸ್ತಾಪ ಏಳು ಜೀವಗಳ ಬಲಿಗೆ ಕಾರಣವಾಗಿರುವುದು ಬೆಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಪತ್ನಿಯ ಮೇಲಿನ ಸಿಟ್ಟನ್ನು ಆಕೆಯ ತಾಯಿ, ಸಹೋದರರು ಹಾಗೂ ಅವರ ಕುಟುಂಬದವರ ಮೇಲೆ ತೀರಿಸಿಕೊಳ್ಳಲು ಆರೋಪಿ ಸಂಚು ರೂಪಿಸಿದ್ದನೇ, ಹತ್ಯೆಗಳಲ್ಲಿ ಮಗಳ ಪಾತ್ರವೇನು, ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವುದಕ್ಕೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದ್ಯ ಬಾಲಕ ಪುನೀತ್ನ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಮಂದಿಯ ಮೃತದೇಹಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸಿದ್ದಾರೆ.
ಅಪ್ರಾಪ್ತ ಪುತ್ರಿಯ ಬ್ರೈನ್ ವಾಷ್
ಅಪ್ರಾಪ್ತ ಮಗಳ ಬ್ರೈನ್ ವಾಷ್ ಮಾಡಿದ್ದಾನೆ, ೧೫ ೨೦ ದಿನದಿಂದ ಒಬ್ಬೋಬ್ಬರೆ ಮಿಸ್ ಆಗಿದ್ದಾನೆ ಎಂದು ೭ ಜನರ ಹತ್ಯೆಗೈದ ಆರೋಪಿ ಕುರಿತು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತ ಹತ್ಯಾಕಾಂಡ ನಡೆದಿದೆ. ಕ್ಯಾಬ್ ಡ್ರೈವರ್ ಒಂದೇ ಕುಟುಂಬದ ೭ ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಇಂದುಶೇಖರ್ ರುಬ್ಬುಗುಂಡಿನಿಂದ ಇಡೀ ಕುಟಂಬವನ್ನೇ ಹತ್ಯೆ ಮಾಡಿದ್ದಾನೆ. ಹೆಂಡ್ತಿ, ಹೆಂಡ್ತಿ ತಾಯಿ, ಹೆಂಡ್ತಿಯ ಅಣ್ಣಂದಿರು, ಅತ್ತಿಗೆಯರನ್ನ ಇಂದುಶೇಖರ್ ಕೊಲೆಗೈದಿದ್ದಾನೆ. ಈ ಪ್ರಕರಣದ ಪ್ರಾಥಮಿಕ ತನಿಖೆಯ ಬಗ್ಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜಾಜೀನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ೩ನೇ ತಾರೀಖು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು. ೭ ಜನರನ್ನು ಒಬ್ಬನೇ ಆರೋಪಿ ಸಾಯಿಸಿದ್ದಾನೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದೆ. ಇದುವರೆಗೆ ಒಂದು ಬಾಡಿ ಮಾತ್ರ ಸಿಕ್ಕಿದೆ. ಇನ್ನೂ ೬ ಬಾಡಿ ಸಿಗಬೇಕಿದೆ ಎಂದು ತಿಳಿಸಿದ್ದಾರೆ.
ಆರೋಪಿಯ ಸ್ವಇಚ್ಚಾ ಹೇಳಿಕೆ ಪ್ರಕಾರ ೭ ಜನರ ಸಾಯಿಸಿದ್ದೀನಿ ಅಂದಿದ್ದಾನೆ. ವೈಯುಕ್ತಿಕ ಕಾರಣಕ್ಕೆ ಕೊಲೆ ಅಂದಿದ್ದಾನೆ. ಆರೋಪಿಯನ್ನ ಹಿಡಿಯುವಾಗ ಮಗು ಒಬ್ಬನನ್ನ ರಕ್ಷಣೆ ಮಾಡಲಾಗಿದೆ. ಮಗುವನ್ನು ಸಾಯಿಸೋ ಪ್ಲಾನ್ ಕೂಡ ಮಾಡಿದ್ದ. ಅಲ್ಲದೇ ಆರೋಪಿಗೆ ೭ ವರ್ಷದ ಮಗಳು ಸಾಥ್ ನೀಡಿದ್ದಾಳೆ. ಅಪ್ರಾಪ್ತ ಮಗಳಿಗೆ ಆರೋಪಿ ಬ್ರೈನ್ ವಾಷ್ ಮಾಡಿದ್ದಾನೆ. ನಂತರ ೧೫ ರಿಂದ ೨೦ ದಿನಗಳ ಅಂತರದಲ್ಲಿ ಒಬ್ಬೊಬ್ಬರೇ ಮಿಸ್ ಆಗಿದ್ದಾರೆ. ನವೆಂಬರ್ ೩ಕ್ಕೆ ಮಿಸ್ಸಿಂಗ್ ಕಪ್ಲೆಂಟ್ ಆಗಿದೆ. ಆರೋಪಿಯೇ ಡಿಸಿಸ್ ಮೊಬೈಲ್ ಇಂದ ಮಾಡಿದ್ದಾನೆ ಅಂತಾ ವಿವರಿಸಿದ್ದಾರೆ.
























