
ಕಲಬುರಗಿ,ಜೂ.18-ಜಿಲ್ಲೆಯ ಸೇಡಂ ತಾಲೂಕಿನ ಕೊಂಟನಪಲ್ಲಿ ಗ್ರಾಮದ ಜಮೀನು ಸರ್ವೆ ನಂಬರ್ 60/1 ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು/ಕಂಪನಿಗಳು ಯಾವುದೇ ಅನುಮತಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಕೂಡಲೇ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಂದೀಪ ಭರಣಿ ಆಗ್ರಹಿಸಿದ್ದಾರೆ.
ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಅವರು, ಸೇಡಂ ತಾಲೂಕಿನ ಕೊಂಟನಪಲ್ಲಿ ಗ್ರಾಮದ ಜಮೀನು ಸರ್ವೆ ನಂಬರ್ 60/1 ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು/ಕಂಪನಿಗಳು ಯಾವುದೇ ಅನುಮತಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಈ ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾನಿಯಾಗುತ್ತಿದೆ. ಭೂಮಿ ಕುಸಿತದ ಭೀತಿ ಉಂಟಾಗಿದೆ ಹಾಗೂ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಎದುರಾಗುತ್ತಿದೆ. ಜೊತೆಗೆ ಧೂಳು ಮತ್ತು ಶಬ್ದ ಮಾಲಿನ್ಯದಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ. ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ, ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಕಲಬುರಗಿ ಜಿಲ್ಲೆಗೆ ಬಂದಾಗ ಈ ವಿಷಯದ ಕುರಿತು ಅವರಿಗೆ ಫೇರಾವ್ ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


























