Home ಜಿಲ್ಲೆ ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ: ಸೆ.೭ರ ಬಂದ್‌ಗೆ ವಿವಿಧ ವ್ಯಾಪಾರ ಸಂಘಟನೆಗಳ ಬೆಂಬಲ

ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ: ಸೆ.೭ರ ಬಂದ್‌ಗೆ ವಿವಿಧ ವ್ಯಾಪಾರ ಸಂಘಟನೆಗಳ ಬೆಂಬಲ

ಯಾದಗಿರಿ: ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ, ಸೆಪ್ಟೆಂಬರ್ ೭ರಂದು ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಸಂಪೂರ್ಣ ಬಂದ್ ನಡೆಸಲು ಸರ್ವ ಸಂಘಟನೆಗಳ ಹೋರಾಟ ಸಮಿತಿ ನಿರ್ಧರಿಸಿದೆ.
ರೈತರ ಹಿತದೃಷ್ಟಿಯಿಂದ ಬಂದ್‌ಗೆ ವ್ಯಾಪಾರಸ್ಥರು, ಸಂಘಟನೆಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಬರ ಪರಿಸ್ಥಿತಿಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ಬಂದ್‌ಗೆ ಕರೆ ನೀಡಿದೆ.
ಬಂದ್‌ಗೆ ವ್ಯಾಪಕ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸರ್ವ ಸಂಘಟನೆಗಳ ಹೋರಾಟ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ರಾಮಸಮುದ್ರ ಅವರ ನೇತೃತ್ವದಲ್ಲಿ ವಿವಿಧ ವ್ಯಾಪಾರ ಸಂಘಟನೆಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಗಾರ ಮತ್ತು ಸರಾಫ್ ಅಂಗಡಿಗಳ ಮಾಲಕರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದ್ದು, ಸಂಘವು ಬಂದ್‌ಗೆ ಬೆಂಬಲ ಸೂಚಿಸಿದೆ.
ಅದೇ ರೀತಿ ಬಟ್ಟೆ ಅಂಗಡಿಗಳ ಮಾಲಕರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ಸೆ.೭ರಂದು ನಡೆಯಲಿರುವ ಯಾದಗಿರಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೂ ಮನವಿ ಸಲ್ಲಿಸಿ ರೈತರ ಹೋರಾಟಕ್ಕೆ ಕೈಜೋಡಿಸುವಂತೆ ಕೋರಲಾಯಿತು.
ಇದಲ್ಲದೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ವ್ಯಾಪಾರಸ್ಥರನ್ನು ಭೇಟಿ ಮಾಡಿ ಸೆಪ್ಟೆಂಬರ್ ೭ರಂದು ನಡೆಯಲಿರುವ ಯಾದಗಿರಿ ಬಂದ್‌ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಯಿತು.
ಸರ್ಕಾರ ಕೂಡಲೇ ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸರ್ವ ಸಂಘಟನೆಗಳ ಹೋರಾಟ ಸಮಿತಿ ಎಚ್ಚರಿಸಿದೆ.
ರೈತರ ಹಿತದೃಷ್ಟಿಯಿಂದ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಹಕರಿಸುವಂತೆ ಸಮಿತಿ ಮನವಿ ಮಾಡಿದೆ.