Home ಜಿಲ್ಲೆ ಪ್ರಜಾಸೌಧ ಕಟ್ಟಡ 3 ಎಕರೆ 18 ಗುಂಟೆಯಲ್ಲಿ ಕಾಮಗಾರಿ ಆರಂಭಿಸಲು ಒತ್ತಾಯ

ಪ್ರಜಾಸೌಧ ಕಟ್ಟಡ 3 ಎಕರೆ 18 ಗುಂಟೆಯಲ್ಲಿ ಕಾಮಗಾರಿ ಆರಂಭಿಸಲು ಒತ್ತಾಯ

ಜಮಖಂಡಿ: ರಬಕವಿ-ಬನಹಟ್ಟಿ ತಾಲ್ಲೂಕಿನ ಪ್ರಜಾಸೌಧ ಕಟ್ಟಡವನ್ನು ರಬಕವಿ ನಗರದಲ್ಲೇ ನಿರ್ಮಾಣ ಮಾಡಬೇಕು ಹಾಗೂ ಈಗಾಗಲೇ ನಿಗದಿಪಡಿಸಿರುವ ಸ್ಥಳದಲ್ಲಿ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿ ಪ್ರಜಾಸೌಧ ಹೋರಾಟ ಸಮಿತಿ ಹಾಗೂ ರಬಕವಿ ಸುತ್ತಮುತ್ತಲಿನ ಗ್ರಾಮಸ್ಥರು ಜಮಖಂಡಿ ತಾಲೂಕು ಆಡಳಿತ ಕಚೇರಿ ಎದುರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಲಾಯಿತು.

ರಬಕವಿ ನಗರದ ಸಿಟಿಎಸ್ ನಂ.80ರಲ್ಲಿ 3 ಎಕರೆ 18 ಗುಂಟೆ ಜಮೀನನ್ನು ಪ್ರಜಾಸೌಧ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಗೆ ಶಾಶ್ವತವಾಗಿ ಹಾಗೂ ಉಚಿತವಾಗಿ ಹಸ್ತಾಂತರಿಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಅಲ್ಲದೆ, ಸಿಟಿಎಸ್ ನಂ.80ರಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಿದ್ದರೂ ಕಾಮಗಾರಿ ಆರಂಭಕ್ಕೆ ವಿಳಂಬವಾಗುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೋರಾಟ ಸಮಿತಿ ಸದಸ್ಯರು ಹೇಳಿದರು.

ಪ್ರಜಾಸೌಧ ರಬಕವಿಯಲ್ಲೇ ನಿರ್ಮಾಣವಾಗಲಿ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಜಾಸೌಧ ಹೋರಾಟ ಸಮಿತಿ ಸದಸ್ಯ ನೀಲಕಂಠ ಮುತ್ತೂರು, ಸರ್ಕಾರ ಈಗಾಗಲೇ ರಬಕವಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜಾಗ ನಿಗದಿಪಡಿಸಿ ಆದೇಶ ಹೊರಡಿಸಿದೆ. ರಬಕವಿ ಪಿಡಬ್ಲ್ಯುಡಿ ಐಬಿ ಹಿಂಭಾಗದಲ್ಲಿರುವ ಸಿಟಿಎಸ್ ನಂ.80ರ 3 ಎಕರೆ 18 ಗುಂಟೆ ಜಾಗವನ್ನು ಪ್ರಜಾಸೌಧ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಸರ್ಕಾರದ ಆದೇಶದಂತೆ ಜಾಗವನ್ನು ಕಂದಾಯ ಇಲಾಖೆಯ ಹೆಸರಿಗೆ ದಾಖಲಿಸಿಕೊಂಡು, ಯಾವುದೇ ವಿಳಂಬ ಮಾಡದೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಈಗಾಗಲೇ ಬಾಗಲಕೋಟೆ ಜಿಲ್ಲಾಧಿಕಾರಿ, ರಬಕವಿ-ಬನಹಟ್ಟಿ ತಹಶೀಲ್ದಾರ್ ಹಾಗೂ ಪೆÇಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದೀಗ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೂ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಬಕವಿ, ರಾಮಪುರ, ಹೊಸೂರು, ಮದನಮಟ್ಟಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 16 ಗ್ರಾಮಗಳ ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ರಬಕವಿಯಲ್ಲೇ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಜಾಸೌಧ ಹೋರಾಟ ಸಮಿತಿ ಸದಸ್ಯರು ಹಾಗೂ ರಬಕವಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.