Home ಜಿಲ್ಲೆ ಕಲಬುರಗಿ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ: ಜಿಲ್ಲೆಯಲ್ಲಿ ವೈದ್ಯಕೀಯ ಅರ್ಹತೆ ಇಲ್ಲದೆ ಕ್ಲಿನಿಕ್‍ಗಳನ್ನು ನಡೆಸುತ್ತಿರುವರೆನ್ನಲಾದ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ ಬುಧರಕರ್ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೆ.11ರಂದು ಮನವಿ ಸಲ್ಲಿಸಿರುವ ಅವರು, ವೈದ್ಯಕೀಯ ವ್ಯಾಸಂಗ ಹಾಗೂ ಸೂಕ್ತ ಅರ್ಹತೆ ಇಲ್ಲದ ವ್ಯಕ್ತಿಗಳು ವೈದ್ಯರೆಂದು ಹೇಳಿಕೊಂಡು ಗ್ರಾಮೀಣ ಭಾಗದ ಮುಗ್ಧ ಜನರಿಗೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೀದರ ತಾಲ್ಲೂಕಿನ ಆಣದೂರು, ಹುಮನಾಬಾದ ತಾಲ್ಲೂಕಿನ ದುಬಲಗುಂಡಿ, ಬೀದರ ನಗರದ ಚಿದ್ರಿ ಹಾಗೂ ಔರಾದ (ಬಿ) ತಾಲ್ಲೂಕಿನ ಜಂಬಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಲ್ಕತ್ತಾದಿಂದ ಬಂದಿರುವರೆನ್ನಲಾದ ವ್ಯಕ್ತಿಗಳು ಅನಧಿಕೃತ ಕ್ಲಿನಿಕ್‍ಗಳನ್ನು ನಡೆಸುತ್ತಿರುವ ಬಗ್ಗೆ ದೂರುಗಳಿವೆ. ಸಂಬಂಧಪಟ್ಟವರ ಶೈಕ್ಷಣಿಕ ದಾಖಲೆಗಳು, ವೈದ್ಯಕೀಯ ಅರ್ಹತಾ ಪ್ರಮಾಣಪತ್ರಗಳು ಹಾಗೂ ಕ್ಲಿನಿಕ್ ನಡೆಸಲು ಅಗತ್ಯವಿರುವ ಪರವಾನಗಿಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅನಧಿಕೃತ ಕ್ಲಿನಿಕ್‍ಗಳಿಗೆ ಅಧಿಕಾರಿಗಳು ಸಹಕಾರ ನೀಡಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡಬಾರದು ಎಂದಿದ್ದಾರೆ.

ಮನವಿಗೆ ಒಂದು ವಾರದೊಳಗೆ ಕ್ರಮ ಕೈಗೊಂಡು, ಅದರ ಮಾಹಿತಿಯನ್ನು ಸಂಘಟನೆಗೆ ನೀಡಬೇಕು. ಇಲ್ಲವಾದಲ್ಲಿ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವಿನಾಶ ಬುಧರಕರ್ ಎಚ್ಚರಿಸಿದ್ದಾರೆ.