Home ಜಿಲ್ಲೆ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ಕಟ್ಟಿದ ಅಂಬೇಡ್ಕರ್ : ರಾಜಕುಮಾರ ಹೆಬ್ಬಾಳೆ

ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ಕಟ್ಟಿದ ಅಂಬೇಡ್ಕರ್ : ರಾಜಕುಮಾರ ಹೆಬ್ಬಾಳೆ

ಬೀದರ್ ಸೆ. 12: ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅನೇಕ ಕಷ್ಟ, ಅವಮಾನ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಎದುರಿಸಿ, ಅವುಗಳ ವಿರುದ್ಧ ದಿಟ್ಟ ಹೋರಾಟ ನಡೆಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಮೂಲಕ ನ್ಯಾಯ ಹಾಗೂ ಸಮಾನ ಹಕ್ಕು ದೊರಕುವಂತೆ ಮಾಡಿದ ಮಹಾನ್ ನಾಯಕರಾಗಿದ್ದಾರೆ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು, ನವದೆಹಲಿ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಹೇಳಿದರು.

ನಗರದ ಶ್ರೀ ಸತ್ಯಂ ಪದವಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಸತ್ಯಂ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ ಹಾಗೂ ಪ್ರಬಂಧ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಜಾನಪದ ಪರಿಷತ್ತಿನ, ಬೀದರ ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ಡಾ. ಸುನಿತಾ ಕೂಡ್ಲಿಕರ್ ಅವರು ಮಾತನಾಡಿ, ಅಂಬೇಡ್ಕರ್ ಅವರ ಬದುಕಿನಲ್ಲಿ ಓದು ಮತ್ತು ಶಿಕ್ಷಣಕ್ಕೆ ಅಪಾರ ಮಹತ್ವವಿತ್ತು. ಎಷ್ಟೇ ಕಷ್ಟಗಳು ಎದುರಾದರೂ ಶಿಕ್ಷಣದ ಮೇಲಿನ ಆಸಕ್ತಿ ಹಾಗೂ ಜ್ಞಾನ ಸಂಪಾದಿಸುವ ಹಂಬಲವನ್ನು ಅವರು ಎಂದಿಗೂ ಕೈ ಬಿಡಲಿಲ್ಲ. ಓದಿನಲ್ಲಿರುವ ಶಕ್ತಿ ಏನು ಎಂಬುದನ್ನು ತಮ್ಮ ಜೀವನದ ಮೂಲಕವೇ ಅಂಬೇಡ್ಕರ್ ಅವರು ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಹಿರಿಯ ಸಾಹಿತಿ ಹಾಗೂ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಎಸ್.ಬಿ. ಕುಚಬಾಳ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಜ್ಞಾನ ಹಾಗೂ ಕಾನೂನು ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮಹಾನ್ ಚಿಂತಕರಾಗಿದ್ದು, ಅವರ ವಿಚಾರಧಾರೆಗಳು ಇಂದು ಇಡೀ ಜಗತ್ತಿಗೆ ಮಾದರಿಯಾಗಿವೆ. ಅಂಬೇಡ್ಕರ್ ಅವರ ಬದುಕು ಮತ್ತು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸುವರ್ಣಾ ಭೋಸ್ಲೆ ಅಧ್ಯಕ್ಷತೆ ವಹಿಸಿದ್ದರು, ಸಿದ್ದಲಿಂಗ ತಗಾರೆ, ಕು. ಕ್ಲೈಮೆಂಟಿನಾ, ಇತರರು ವೇದಿಕೆ ಮೇಲಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಕು. ವೈಷ್ಣವಿ ಪ್ರಥಮ ಸ್ಥಾನ, ಬಿ.ಕಾಂ ಐದನೇ ಸೆಮಿಸ್ಟರನ ವಿದ್ಯಾರ್ಥಿನಿ ಕು.ಕವಿತಾ ದ್ವಿತೀಯ ಸ್ಥಾನ, ಕು. ಅನುರಾಧ ತೃತೀಯ ಸ್ಥಾನ ಪಡೆದರೆ, ಕು.ಪಾರ್ವತಿ, ಹಾಗೂ ಕು.ಜ್ಯೋತಿ, ಅವರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಿದರು.

ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕೊನೆಯಲ್ಲಿ ಪುಸ್ತಕ ರೂಪದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ನಿರ್ಣಾಯಕರಾಗಿ ನರಸಿಂಗ ಧೂಳಪ್ಪಾ ಹಾಗೂ ಡಾ.ಮಹಾದೇವಿ ಕೊಳಾರ ಕಾರ್ಯನಿರ್ವಹಿಸಿದರು.

ಅದೇ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅನೇಕರು ಉಪಸ್ಥಿತರಿದ್ದರು.