Home ಜಿಲ್ಲೆ ಕಲಬುರಗಿ ಬರದ ಸಂಕಷ್ಟಕ್ಕೆ ಪರಿಹಾರ: ಈಡೇರಿಸಲು ಒತ್ತಾಯ

ಬರದ ಸಂಕಷ್ಟಕ್ಕೆ ಪರಿಹಾರ: ಈಡೇರಿಸಲು ಒತ್ತಾಯ

ಆಳಂದ: ತಾಲೂಕಿನಾದ್ಯಂತ ಬರದ ಸಂಕಷ್ಟ ತೀವ್ರವಾಗಿರುವ ಹಿನ್ನೆಲೆಯಲ್ಲಿ ವಿವಿಧ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹಾಗೂ ಭಾರತೀಯ ಖೇತ ಮಜದೂರ್ ಯೂನಿಯನ್ (ಬಿಕೆಎಂಯು) ತಾಲೂಕು ಸಮಿತಿ ವತಿಯಿಂದ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಸರಣಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಇದರ ಭಾಗವಾಗಿ ಕೊರಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮದಾಸ್ ಪೂಜಾರಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ತಾಲೂಕಿನಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೀ-ರಾಮಜಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ದನದ ಕೊಟ್ಟಿಗೆ, ಕುರಿದೊಡ್ಡಿ, ರಾಶಿಕಟ್ಟಿ, ‘ನಮ್ಮ ಹೊಲ-ನಮ್ಮ ರಸ್ತೆ’ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸಮರ್ಪಕವಾಗಿ ಯೋಜಿಸಿ ಅನುಷ್ಠಾನಗೊಳಿಸಬೇಕು. ಈ ಯೋಜನೆಗಳನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೂಲಿ ಕಾರ್ಮಿಕರಿಗೆ ಪ್ರತಿದಿನ ೬೦೦ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ:
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜಲಜೀವನ್ ಮಿಷನ್ (ಜೆಜೆಎಂ) ಮೂಲಕ ಪ್ರತಿಯೊಂದು ಮನೆಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಬೇಕು. ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗಿರುವುದರಿAದ ಕೂಡಲೇ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಸಾಲ ಮನ್ನಾ, ಎಕರೆಗೆ ೫೦ ಸಾವಿರ ಪರಿಹಾರಕ್ಕೆ ಆಗ್ರಹ:
ಬರ ಹಾಗೂ ಕೃಷಿ ಸಂಕಷ್ಟದಿAದ ರೈತರು ಸಾಲದ ಹೊರೆಯಲ್ಲಿ ಸಿಲುಕಿದ್ದಾರೆ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬ್ಯಾಂಕ್ ಹಾಗೂ ಫೈನಾನ್ಸ್ ಸಂಸ್ಥೆಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ಬರದಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರಿ ಶಿಕ್ಷಣ, ಆರೋಗ್ಯ ವ್ಯವಸ್ಥೆ ಬಲಪಡಿಸಿ:
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ವಾಣಿಜ್ಯೀಕರಣದಿಂದ ಬಡ ಹಾಗೂ ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶುಲ್ಕದ ಹೆಸರಿನಲ್ಲಿ ನಡೆಯುತ್ತಿರುವ ದುಬಾರಿ ಶಿಕ್ಷಣ ಪದ್ಧತಿಗೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಹೆಚ್ಚಿನ ಅನುದಾನ ನೀಡಿ ಮೂಲಸೌಕರ್ಯ ಬಲಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅಗತ್ಯ ಸೌಲಭ್ಯ ಕಲ್ಪಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎಐಕೆಎಸ್ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಮಾಡಿಯಾಳ, ಸಿಪಿಐ ತಾಲೂಕು ಕಾರ್ಯದರ್ಶಿ ಅಶ್ವಾಕ್ ಮುಲ್ಲಾ, ಧರ್ಮಣ್ಣ ಪೂಜಾರಿ, ಎಐಕೆಎಸ್ ತಾಲೂಕು ಅಧ್ಯಕ್ಷ ರಮೇಶ ಹಾತ್ತಿಗಾಳ, ಬಿಕೆಎಂಯು ತಾಲೂಕು ಅಧ್ಯಕ್ಷ ಮಹಾನಂದಾ ತುಕಾನೆ, ಸಿಪಿಐ ತಾಲೂಕು ಸಹಕಾರ್ಯದರ್ಶಿ ಮೈಲಾರಿ ಜೋಗೆ, ಎಐಕೆಎಸ್ ತಾಲೂಕು ಮುಖಂಡ ಮಹಾದೇವ ಪೂಜಾರಿ, ಸಿಪಿಐ ತಾಲೂಕು ಖಜಾಂಚಿ ರತನಲಾಲ್ ಕಳಸಟ್ಟ, ಜಗನ್ನಾಥ ಗುಂಡಗುರಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.