Home ಜಿಲ್ಲೆ ಬೆಂಗಳೂರು ಡಿ.ಸಿ.ಎಂ ಡಾ. ಪರಮೇಶ್ವರ್ ರಾಜೀನಾಮೆಗೆ ಆಗ್ರಹ

ಡಿ.ಸಿ.ಎಂ ಡಾ. ಪರಮೇಶ್ವರ್ ರಾಜೀನಾಮೆಗೆ ಆಗ್ರಹ

ಬೆಂಗಳೂರು,ಜೂ.೬-ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳುವ ಮೂಲಕ ಎಸ್.ಸಿ. /ಎಸ್.ಟಿ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಡಾ. ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಿ ಸಚಿವ ಸಂಪುಟದಿಂದ ಹೊರಬರಬೇಕೆಂದು ಹಿರಿಯ ದಲಿತ ಮುಖಂಡ, ವಕೀಲ ಅನಂತರಾಯಪ್ಪ ಆಗ್ರಹಿಸಿದರು.

ಈ ಹಿಂದೆ ಮೂರು ಸಾರಿ ಅವಕಾಶ ವಂಚಿತರಾಗಿದ್ದ ಡಾ. ಪರಮೇಶ್ವರ್‌ರವರು ಈ ಸಾರಿಯಾದರೂ ಮುಖ್ಯಮಂತ್ರಿ ಆಗುತ್ತಾರೆಂದು, ಪರಿಶಿಷ್ಟ ಸಮುದಾಯಕ್ಕೆ ಘನತೆ ಗೌರವ ತರುತ್ತಾರೆಂದು ನಿರೀಕ್ಷಿಸಲಾಗಿತ್ತು. ಅವರಿಗೆ ಈಗ ನೀಡಲಾಗಿರುವ ಉಪಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರೆ ಸಮಾಜದ ದೃಷ್ಟಿಯಲ್ಲಿ ವಿಶೇಷವಾಗಿ ದಲಿತರ ದೃಷ್ಟಿಯಲ್ಲಿ ಹಿರೋ ಆಗುತ್ತಿದ್ದರು. ಆದರೆ ಈ ಸ್ಥಾನವನ್ನು ಒಪ್ಪಿಕೊಂಡು ಸಚಿವ ಸಂಪುಟ ಸೇರಿರುವುದು ತೀವ್ರ ಮುಜುಗರದಿಂದ ಪರಿಶಿಷ್ಟರು ತಲೆ ತಗ್ಗಿಸುವಂತೆ ಆಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದು ಡಾ. ಪರಮೇಶ್ವರ್ ರವರ ವೈಯಕ್ತಿಕ ವಿಚಾರವಲ್ಲ. ದಲಿತ ಸಮುದಾಯದ ಘನತೆ ಗೌರವ ಹಾಗೂ ಸ್ವಾಭಿಮಾನದ ಪ್ರಶ್ನೆ, ಡಾ. ಪರಮೇಶ್ವರ್ ರವರ ಈಗಿನ ನಡೆಯಿಂದ “ ದಲಿತರು ಸ್ವಾಭಿಮಾನ ಹೀನರು, ತಮ್ಮ ಅರ್ಹತೆಗೆ, ಯೋಗ್ಯತೆಗೆ ತಕ್ಕದ್ದನ್ನು ಪಡೆದುಕೊಳ್ಳುವ ಛಲ ಇಲ್ಲದವರು, ಕೊಟ್ಟದ್ದಕ್ಕೆ ಕೈ ಒಡ್ಡುವ ನಿಕೃಷ್ಟ ಜನಾಂಗ ಎಂಬ ಸದರದ ಭಾವನೆ ಸಮಾಜದಲ್ಲಿ ಮೂಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಲಿತ ಸಮುದಾಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ವಿರುದ್ಧ ಇಲ್ಲ. ಡಿ.ಕೆ.ಶಿವಕುಮಾರ್ ರವರು ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ತಮ್ಮ ಗುರಿಸಾಧಿಸಿದ್ದಾರೆ. ಅವರಿಗೂ ಅವರ ಸರ್ಕಾರಕ್ಕೂ ಶುಭ ಹಾರೈಸುತ್ತೇವೆ ಎಂದು ತಿಳಿಸಿರುವ ಅನಂತರಾಯಪ್ಪ ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿರುವ ಡಾ. ಪರಮೇಶ್ವರ್ ರವರು ಕೂಡಲೇ ರಾಜೀನಾಮೆ ನೀಡುವ ಮೂಲಕ ದಲಿತರ ಆತ್ಮಗೌರವ ಹಾಗೂ ಸ್ವಾಭಿಮಾನವನ್ನು ಎತಿ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ರಾಜೀನಾಮೆ ನೀಡದಿದ್ದರೆ ವಿವಿಧ ದಲಿತ ಸಂಘಟನೆಗಳು ತಮ್ಮ ತಮ್ಮ ಸಂಘಟನೆಗಳ ಹೆಸರಿನಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಡಾ. ಪರಮೇಶ್ವರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅನಂತರಾಯಪ್ಪ ತೀಳಿಸಿದ್ದಾರೆ.