
ಕೋಲಾರ,ಸೆ.೧- ಕೆಜಿಎಫ್‌ನ ಪ್ರಸಿದ್ಧ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಅವರ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆ.ಜಿ.ಎಫ್. ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಶ್ರೀವಾರಿ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕೋಲಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಅಧಿಕಾರಿಗಳ ನಿರಾಸಕ್ತಿ ಮತ್ತು ವಿಳಂಬ ಧೋರಣೆ: ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ಕೊಲಾರ ಸಹಾಯಕ ಕಮಿಷನರ್ ಹಾಗೂ ಕೆಜಿಎಫ್ ತಹಶೀಲ್ದಾರ್ ಕಚೇರಿಗಳಲ್ಲಿ ಹಲವು ಕಡತಗಳು ಮತ್ತು ದೂರುಗಳು ಬಾಕಿ ಉಳಿದಿವೆ. ಈ ಕುರಿತು ಮೇಲಧಿಕಾರಿಗಳು ಹಲವು ಬಾರಿ ನೋಟಿಸ್ ಮತ್ತು ಸ್ಮರಣಪತ್ರಗಳನ್ನು ನೀಡಿದ್ದರೂ ಇಒ ಮಂಜುನಾಥ್ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ದೇವರ ಆಭರಣಗಳ ತನಿಖೆಯಲ್ಲಿ ಉಲ್ಲಂಘನೆ: ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ತೊಡಸಲಾಗಿರುವ ಆಭರಣಗಳ ವಿವರಗಳನ್ನು ನಿಯಮಾನುಸಾರ ತಾಳೆ ಮಾಡುವಂತೆ ಆದೇಶಿಸಿದ್ದರೂ, ಇಒ ಅವರು ಆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ಒಕ್ಕೂಟ ದೂರಿದೆ.
ಆರ್‌ಟಿಐ ಮಾಹಿತಿಗೆ ಸ್ಪಂದನೆ ಇಲ್ಲ: ಸಾರ್ವಜನಿಕರು ಹಾಗೂ ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿದರೂ, ಯಾವುದೇ ಮಾಹಿತಿ ನೀಡದೆ ಅಧಿಕಾರಿಯು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ದೇವಾಲಯದ ಆಸ್ತಿ ಮತ್ತು ಆಭರಣಗಳ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದ ಇಒ ಮಂಜುನಾಥ್ ಅವರ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಒಕ್ಕೂಟದ ಉಪಾಧ್ಯಕ್ಷ ನಟರಾಜ್, ಸವಿತ ಸಮನಾಜ ಅಧ್ಯಕ್ಷ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಹನುಮಾನ್ ದಾಸ್, ಶ್ರೀವಾರಿ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ಎಸ್ ಬಾಬು, ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಇದ್ದರು.































