
ಕಲಬುರಗಿ,ಜೂ 10:ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ ಅವರು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಲತಾಯಿ ಧೋರಣೆ ಅನುಸರಿಸದೆ ಅಭಿವೃದ್ಧಿ ಪಡಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಆಗ್ರಹಿಸಿದರು
ಪತ್ರಿಕಾಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದೆ.ಕಲಬುರಗಿ ಮಹಾನಗರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ, ಆಸ್ಪತ್ರೆಗಳಿವೆ, ಸಣ್ಣ ಸಣ್ಣ ವ್ಯಾಪಾರ ಕೇಂದ್ರಗಳಿವೆ.ಆದರೆ ಯುವಕರಿಗೆ ಉದ್ಯೋಗ ನೀಡುವ ಬೃಹತ್ ಕೈಗಾರಿಕೆಗಳಿಲ್ಲ.ಉದ್ಯೋಗ ಅರಸಿ ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರು ಬೆಂಗಳೂರು ಬೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.ಯಾವುದೇ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ..ಕಲ್ಯಾಣ ಭಾಗದ ಕಲಬುರಗಿ,ಬೀದರ್,ಯಾದಗಿರಿ, ರಾಯಚೂರು ಕೊಪ್ಪಳ ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ.ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಯೋಜನೆಗಳಿದ್ದರೂ ಅನುಷ್ಠಾನಕ್ಕೆ ಬರದೆ ಆಣೆಕಟ್ಟುಗಳಲ್ಲಿನ ನೀರು ರೈತರ ಜಮೀನುಗಳಿಗೆ ಹರಿಯುತ್ತಿಲ್ಲ.ಕಾರಣ ಇಲ್ಲಿಯವರೆಗೂ ವೈಜ್ಞಾನಿಕವಾಗಿ ಕಾಲುವೆಗಳನ್ನು ನಿರ್ಮಿಸಿಲ್ಲ.ಇದರಿಂದ ರೈತರು ನೀರಾವರಿ ಬಿಟ್ಟು ಮಳೆ ಆಶ್ರಿತ ಬೆಳೆಯುತ್ತಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿ ವರ್ಷ ಬಜೆಟ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ.ಆ ಹಣದ ಶೇ.10 ರಷ್ಟು ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ..ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಂದಾಗಬೇಕು.ಕೆಎಂಎಫ್ ಮಾದರಿಯಲ್ಲಿ ತೊಗರಿ ಮಂಡಳಿಗೆ ಅನುದಾನ ಬಿಡುಗಡೆ ಮಾಡಬೇಕು.ರೈತರ ಪಂಪ್ ಸೆಟ್ ಗಳಿಗೆ ನಿರಂತರ 12 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಆಗಬೇಕು.ಸರಕಾರವು ಕೈಗಾರಿಕೆ ಮತ್ತು ಇತರ ಸ್ಥಾಪನೆಗಾಗಿ ರೈತರಿಂದ ಭೂಮಿ ಪಡೆದು ಈಗಾಗಲೇ ವರ್ಷಗಳಿಂದ ಖಾಲಿ ಬಿದ್ದಿರುವ ಜಮೀನುಗಳು ಅನ್ನದಾತನಿಗೆ ಮರಳಿ ನೀಡಬೇಕು ಎಂದು ಒತ್ತಾಯಿಸಿದರು
371(ಜೆ) ಕಲಂ ಜಾರಿಯಾಗಿ ದಶಕ ಕಳೆದರೂ ಇಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 35 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಹಿಂದೇಟು ಹಾಕುತ್ತಿದೆ.ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಬಹಳ ದಿನಗಳಿಂದ ಕೂಗು ಇದ್ದರೂ ಅದು ಮರೆಮಾಚಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆÀವರು ಈ ವಿಷಯದಲ್ಲಿ ಮುತುವರ್ಜಿ ವಹಿಸಬೇಕು.ಸರಕಾರದ ಗಮನ ಸೆಳೆಯಬೇಕು ಎಂದರು.
ಕಲಬುರಗಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಹಾಗೂ ನಗರದಲ್ಲಿ ಪ್ರವೇಶಿಸುತ್ತಿರುವ ಭಾರಿ ಗಾತ್ರದ ವಾಹನಗಳನ್ನು ಪತಡೆಗಟ್ಟಲು ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿರುವ ಎರಡನೆ ರಿಂಗ್ ರೋಡ್ ನಿರ್ಮಾಣದ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.ಕಲಬುರಗಿ, ಬೀದರ್, ರಾಯಚೂರು,ಯಾದಗೀರಿ ಜಿಲ್ಲೆಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು.ಈ ಜಿಲ್ಲೆಗಳಲ್ಲಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಆನಂದ ತೇಗನೂರ,ಪ್ರಶಾತ ತಂಬೂರಿ,ಗುರುಲಿಂಗಪ್ಪ ಟೆಂಗಳಿ,ಪರಮೇಶ್ವರ ಹಡಪದ,ರಾಜು ಬಂದರವಾಡ,ಅಮೀತ ನಾಗನಹಳ್ಳಿ,ಬಾಬಾ ಫಕ್ರುದ್ದಿನ್,ರಾಜು ಜೈನ್ ಉಪಸ್ಥಿತರಿದ್ದರು.


























