
ಕೋಲಾರ, ಸೆ.೧- ನಗರದ ಅಗ್ರೋ ಆಫೀಸ್ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಮಂಜೂರಾಗಿರುವ ಹೈಟೆಕ್ ವಿದ್ಯುತ್ ಚಿತಾಗಾರ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಿ, ಸಾರ್ವಜನಿಕರ ಶವಸಂಸ್ಕಾರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕೋಲಾರ ನಗರದ ಕಠಾರಿಪಾಳ್ಯ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು ಆರು ತಿಂಗಳ ಹಿಂದೆ ಕೋಲಾರ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರು ಈ ಹೈಟೆಕ್ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ, ಗುದ್ದಲಿ ಪೂಜೆಯ ಸಂದರ್ಭದಲ್ಲಿ ಸ್ಥಳೀಯವಾಗಿ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಸಮುದಾಯದ ಮುಖಂಡರು ಹಾಗೂ ನಿವಾಸಿಗಳ ಸುದೀರ್ಘ ಚರ್ಚೆಯ ಬಳಿಕ, ಪಕ್ಕದಲ್ಲೇ ಇದ್ದ ಕುರುಬ ಸಮುದಾಯಕ್ಕೆ ಮೀಸಲಿದ್ದ ಸ್ಮಶಾನದ ಜಾಗದಲ್ಲಿ ಚಿತಾಗಾರ ನಿರ್ಮಿಸಲು ನಿರ್ಧರಿಸಿ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು.
ಆದರೆ, ಗುದ್ದಲಿ ಪೂಜೆ ಮುಗಿದು ತಿಂಗಳುಗಳು ಕಳೆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅಡೆತಡೆ ಹಾಗೂ ಹುನ್ನಾರದಿಂದಾಗಿ ಕಾಮಗಾರಿ ಪ್ರಾರಂಭವಾಗದೆ ಉಳಿದುಕೊಂಡಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೋಲಾರದ ಅಗ್ರೋ ಆಫೀಸ್ ಹಿಂಭಾಗದ ರುದ್ರಭೂಮಿಯಲ್ಲಿ ವರ್ಷಗಳಿಂದ ಸತತವಾಗಿ ಅಂತ್ಯಸಂಸ್ಕಾರ ನಡೆಯುತ್ತಾ ಬಂದಿದ್ದು, ಮುಂದಿನ ದಿನಗಳ ಜಾಗದ ಕೊರತೆ ಉಂಟಾಗದಂತೆ ಸಾಂಪ್ರದಾಯಿಕ ಶವಸಂಸ್ಕಾರಕ್ಕೆ ಹೆಚ್ಚಿನ ಜಾಗದ ಅಗತ್ಯವಿರುತ್ತದೆ. ವಿದ್ಯುತ್ ಚಿತಾಗಾರದಿಂದ ಕಡಿಮೆ ಜಾಗದಲ್ಲಿ ಅತ್ಯಂತ ಶೀಘ್ರವಾಗಿ ಮತ್ತು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಬಹುದಾಗಿದೆ ಎಂದು ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಸಾಂಪ್ರದಾಯಿಕ ದಹನಕ್ಕೆ ಅಪಾರ ಪ್ರಮಾಣದ ಉರುವಲು ಮರಗಳನ್ನು ಬಳಸಲಾಗುತ್ತದೆ. ವಿದ್ಯುತ್ ಚಿತಾಗಾರದಿಂದ ಮರಗಳ ಮಾರಣಹೋಮ ತಪ್ಪುವುದರ ಜೊತೆಗೆ ವಾಯು ಮಾಲಿನ್ಯ ಮತ್ತು ಹೊಗೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.ಉರುವಲು ಕಟ್ಟಿಗೆ ಹಾಗೂ ಇತರ ಸಾಮಗ್ರಿಗಳ ವೆಚ್ಚ ತಪ್ಪುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಕಡಿಮೆ ಅವಧಿಯಲ್ಲಿ ದಹನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಸುಧಾರಿತ ಮಾಲಿನ್ಯ ನಿಯಂತ್ರಣ ಸಾಧನಗಳು ಹಾಗೂ ಚಿಮಣಿ ವ್ಯವಸ್ಥೆ ಇರುವುದರಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ದುರ್ವಾಸನೆ ಹಾಗೂ ಹೊಗೆಯ ತೊಂದರೆ ಇರುವುದಿಲ್ಲ ಎನ್ನುವುದನ್ನು ವಿದ್ಯುತ್ ಚಿತಾಗಾರಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವವರು ಅರಿಯಬೇಕಿದೆ.
ಜನಸಾಮಾನ್ಯರ ಹಿತದೃಷ್ಟಿಯಿಂದ ಹಾಗೂ ಪರಿಸರ ನೈರ್ಮಲ್ಯದ ಹಿತದೃಷ್ಟಿಯಿಂದ ಮಂಜೂರಾಗಿರುವ ಹೈಟೆಕ್ ವಿದ್ಯುತ್ ಚಿತಾಗಾರ ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸ್ಥಳೀಯವಾಗಿ ಶವಸಂಸ್ಕಾರಕ್ಕೆ ಎದುರಾಗಿರುವ ತೊಂದರೆಯನ್ನು ನಿವಾರಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದು ಯಾವುದೇ ದಲಿತರ ಸ್ಮಾಶನದ ಜಾಗವಲ್ಲ ಇದು ಸರ್ಕಾರಿ ಶ್ಮಶಾಸನ ಜಾಗವಾಗಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಚಾಲನೆ ನೀಡಿರುವ ವಿದ್ಯುತ್ ಚಿತಗಾರ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಹಾಗೂ ಶಾಸಕರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ.ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ಕಠಾರಿಪಾಳ್ಯದ ಗಂಗಣ್ಣ ಗ್ಯಾರೆಂಟಿ ಯೀಜನೆಗಳ ಜಿಲ್ಲಾಧ್ಯಕ್ಣ ವೈ ಶಿವಕುಮಾರ್, ಅಂಚೆ ಅಶ್ವಥ್, ಕೈಲಾಶ್, ಚಂಬಕೂರು ಶ್ರೀನಿವಾಸ್, ಚಿಟ್ಟಿ ನಗರಸಭೆ ಮಾಜಿ ಸದಸ್ಯ ಅಂಬರೀಶ್, ಶಿಕ್ಷಣ ಸುಧಾರಣ ಸಮಿತಿ ಉಪಾಧ್ಯಕ್ಷ ಬಾಲು, ನಗರಸಭಾ ಸದಸ್ಯ ಅಮರ್, ಕೆಟಿ ಅಮರನಾಥ್, ಮೆಸ್ ಚಂದ್ರಣ್ಣ, ಮಾಜಿ ನಗರಸಭೆ ಅಧ್ಯಕ್ಷರುಗಳಾದ, ಕಾಲಾ ಪ್ರಕಾಶ್, ಮಾಜಿ ನಗರಸಭಾ ಸದಸ್ಯ ಮಂಜುನಾಥ್, ಗೋವಿಂದರಾಜು (ಮುದ್ದಪ್ಪ), ಎನ್.ಎಸ್.ಯು. ಐ ಮಾಜಿ ಅಧ್ಯಕ್ಷ, ಭರತ್ ಕೃಷ್ಟದೇವರಾಯ್ ಅಪ್ಪಿ ನಾರಾಯಣಸ್ವಾಮಿ, ಕಾಡಗುರು ನಾಗಭೂಷಣ್ ಸಾ.ಮ ಅನೀಲ್, ಸಾ.ಮ ಸುನೀಲ್, ಮಾಜಿ ನಗರಸಭೆ ಸದಸ್ಯ ಮೋಹನ್ ಬಾಬು ಮುನೇಶ್, ಹಾಗೂ ಕಠಾರಿಪಾಳ್ಯದ ಹಲವಾರು ಪ್ರಮುಖರು ಸೇರಿದಂತೆ ಅಕ್ಕಪದ ಸ್ಥಳೀಯರು ಇದ್ದರು.































