Home ಜಿಲ್ಲೆ ಕಲಬುರಗಿ ಶ್ರೀರಾಮ ಮಂದಿರ ದೇಣಿಗೆ ಹಗರಣದ ಸಮಗ್ರ ತನಿಖೆಗೆ ಆಗ್ರಹ

ಶ್ರೀರಾಮ ಮಂದಿರ ದೇಣಿಗೆ ಹಗರಣದ ಸಮಗ್ರ ತನಿಖೆಗೆ ಆಗ್ರಹ

ಕಲಬುರಗಿ :ಜೂ.26: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿರುವ ನೂರಾರು ಕೋಟಿ ರೂಪಾಯಿ ದೇಣಿಗೆ ಹಾಗೂ ಬೆಳ್ಳಿ-ಬಂಗಾರದ ಕಾಣಿಕೆಗಳ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಪ್ರದೇಶ್ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ರಾಜ್ಯ ಸಂಚಾಲಕ ಶಾಂತಪ್ಪ ಎ. ಕೂಡಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆಮೂಲೆಗಳಿಂದ ಸಾವಿರಾರು ಹಿಂದೂ ಕಾರ್ಯಕರ್ತರು, ರಾಮಭಕ್ತರು ಹಾಗೂ ಸಾರ್ವಜನಿಕರು ಭಕ್ತಿಯಿಂದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಜೊತೆಗೆ ಬಂಗಾರ ಮತ್ತು ಬೆಳ್ಳಿಯ ಇಟ್ಟಿಗೆಗಳು ಸೇರಿದಂತೆ ಅಪಾರ ಪ್ರಮಾಣದ ಅಮೂಲ್ಯ ವಸ್ತುಗಳನ್ನು ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಮಂದಿರ ನಿರ್ಮಾಣ ಟ್ರಸ್ಟ್‍ನ ಕೆಲ ಪ್ರಮುಖರು, ಆರ್‍ಎಸ್‍ಎಸ್‍ನ ಕೆಲವು ಮುಖಂಡರು ಹಾಗೂ ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರು ಈ ಹಗರಣದಲ್ಲಿ ಭಾಗಿಯಾಗಿರುವ ಸಾಧ್ಯತೆಗಳ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಹೀಗಾಗಿ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಕೇಂದ್ರ ತನಿಖಾ ದಳ (ಸಿಬಿಐ) ಅಥವಾ ಸುಪ್ರೀಂ ಕೋರ್ಟ್‍ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗುವುದು. ಜೊತೆಗೆ, ತನಿಖೆ ಪಾರದರ್ಶಕವಾಗಿ ನಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಹಾಗೂ ಕಾಣಿಕೆಗಳ ಬಳಕೆಯ ಕುರಿತು ಸಂಪೂರ್ಣ ಸತ್ಯಾಂಶವನ್ನು ದೇಶದ ಜನತೆಗೆ ತಿಳಿಸಬೇಕೆಂದು ಕೂಡಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.