Home ಜಿಲ್ಲೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಾನೂನು ಸುವ್ಯವಸ್ಥೆಗೆ ಆದ್ಯತೆ : ಐಜಿಪಿ ಸಂದೀಪ ಪಾಟೀಲ

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಾನೂನು ಸುವ್ಯವಸ್ಥೆಗೆ ಆದ್ಯತೆ : ಐಜಿಪಿ ಸಂದೀಪ ಪಾಟೀಲ

ಸಂಜೆ ವಾಣಿ ವಾರ್ತೆ,
ಜಮಖಂಡಿ, ಜೂ. ೧೮:ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮೊದಲ ಜವಾಬ್ದಾರಿಯಾಗಿದ್ದು, ಸಮಾಜಘಾತುಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಉತ್ತರ ವಲಯದ ನೂತನ ಐಜಿಪಿ ಸಂದೀಪ ಪಾಟೀಲ ಹೇಳಿದರು.

ಬುಧವಾರ ಜಮಖಂಡಿ ನಗರದ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ವಲಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳ ಕಾರ್ಯವೈಖರಿ ಪರಿಶೀಲನೆಗಾಗಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ಮುಧೋಳ ಹಾಗೂ ಜಮಖಂಡಿ ಠಾಣೆಗಳಲ್ಲಿ ಅಪರಾಧ ಪ್ರಕರಣಗಳ ದಾಖಲೆ, ತನಿಖೆ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿರುವುದಾಗಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಗಾಂಜಾ, ಮಾವಾ ಹಾಗೂ ಡ್ರಗ್ಸ್ಗಳ ಅಕ್ರಮ ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಜಾಲಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು. ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಇಲಾಖೆಯು ಬದ್ಧವಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಠಾಣೆಗಳ ಕಾರ್ಯಕ್ಷಮತೆ ಹೆಚ್ಚಿಸುವುದು, ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದು ಹಾಗೂ ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ಸಂದೀಪ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪೊಲೀಸ್ ಠಾಣೆಯಲ್ಲಿ ಸಸಿ ನೆಟ್ಟ ಐಜಿಪಿ

ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಐಜಿಪಿ ಸಂದೀಪ ಪಾಟೀಲ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವಂತೆ ಕರೆ ನೀಡಿದರು. ಈ ವೇಳೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.