Home ಕ್ರೈಂ ಸುದ್ದಿಗಳು ವಿವಿಧೆಡೆ ಅಪರಾಧ ಪ್ರಕರಣಗಳು ದಾಖಲು:ಮಹಿಳೆ ಸಾವು, ಲೈಂಗಿಕ ದೌರ್ಜನ್ಯ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ವಿವಿಧ...

ವಿವಿಧೆಡೆ ಅಪರಾಧ ಪ್ರಕರಣಗಳು ದಾಖಲು:ಮಹಿಳೆ ಸಾವು, ಲೈಂಗಿಕ ದೌರ್ಜನ್ಯ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ವಿವಿಧ ಘಟನೆ

ಯಾದಗಿರಿ: ಜಿಲ್ಲೆಯಲ್ಲಿ ವಿವಿಧೆಡೆ ನಡೆದ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಕೊಲೆ ಆರೋಪ, ಲೈಂಗಿಕ ದೌರ್ಜನ್ಯ, ಪೆÇಲೀಸ್ ಅಧಿಕಾರಿಯ ಮೇಲೆ ಹಲ್ಲೆ, ರಸ್ತೆ ಅಪಘಾತ, ಕೌಟುಂಬಿಕ ಕಲಹ ಹಾಗೂ ಬಾಲ್ಯವಿವಾಹ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳು ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಸಾವು: ಸುರಪುರದ ಮೇದಾರಗಲ್ಲಿಯ ಶೋಭಾ ದೇವಿಂದ್ರ ವಡ್ಡರ್ (28) ಆ.10ರಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಪತಿ ದೇವಿಂದ್ರಪ್ಪ ಅವರು ಶೋಭಾಗೆ ಕಿವಿ ಕೇಳಿಸುವುದಿಲ್ಲ ಎಂಬ ಕಾರಣಕ್ಕೆ ಆಗಾಗ್ಗೆ ಜಗಳ ಮಾಡುತ್ತಿದ್ದರು. ಮತ್ತೊಂದು ಮದುವೆಯಾಗುವುದಾಗಿ ಹೇಳಿ ಕಿರುಕುಳ ನೀಡುತ್ತಿದ್ದರು ಎಂದು ಮೃತರ ತಾಯಿ ಭಾರತಿ ಆರೋಪಿಸಿದ್ದಾರೆ. ಪತಿಯೇ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ನೀಡಿರುವ ದೂರಿನ ಆಧಾರದ ಮೇಲೆ ಸುರಪುರ ಠಾಣೆಯಲ್ಲಿ ಬಿಎನ್‍ಎಸ್ ಕಲಂ 103(1) ಅಡಿ ಪ್ರಕರಣ ದಾಖಲಾಗಿದೆ.

ಬುದ್ಧಿಮಾಂದ್ಯ ಯುವತಿ ಮೇಲೆ ದೌರ್ಜನ್ಯ ಆರೋಪ: ಗುರುಮಠಕಲ್ ಠಾಣೆ ವ್ಯಾಪ್ತಿಯ ಗ್ರಾಮದ 19 ವರ್ಷದ ಬುದ್ಧಿಮಾಂದ್ಯ ಯುವತಿ ಮೇಲೆ ಹಲವು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಜ.15ರಿಂದ ಜು.22ರವರೆಗೆ ಸಂಜು ಕಾಕಾ ಎಂಬಾತ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿಯ ತಾಯಿ ದೂರಿದ್ದಾರೆ. ಮುಂಬೈನ ಸರ್ ಜೆ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಅಲ್ಲಿನ ಎಂಐಡಿಸಿ ಠಾಣೆಯಲ್ಲಿ ಜೀರೋ ಎಫ್‍ಐಆರ್ ದಾಖಲಿಸಲಾಗಿತ್ತು. ಘಟನೆ ಗುರುಮಠಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿದೆ.

ಪಿಎಸ್‍ಐ ಮೇಲೆ ಕಟ್ಟಿಗೆಯಿಂದ ಹಲ್ಲೆ: ಸೈದಾಪುರದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‍ಐ ಭೀಮರಾಯ ದಾನನ್ನೋರ ಅವರ ಮೇಲೆ ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಸೋಮವಾರ ಸಂಜೆ ಕಾಂಚನಾ ಲಾಡ್ಜ್ ಸಮೀಪ ಕೆಲವರು ಹಲ್ಲೆ ಮಾಡಲು ಬರುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೆÇಲೀಸರ ಬಳಿ ರಕ್ಷಣೆ ಕೋರಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ಆತನ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪಿಎಸ್‍ಐ ಮಧ್ಯಪ್ರವೇಶಿಸಿದ್ದರು. ಆಗ ಗುರುಲಿಂಗಯ್ಯ ಹಿರೇಮಠ ಎಂಬಾತ ಕಟ್ಟಿಗೆಯಿಂದ ಪಿಎಸ್‍ಐ ಅವರ ಎಡಗೈ ಮುಂಗೈಗೆ ಹೊಡೆದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಅವರನ್ನು ಸೈದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್‍ಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ: ವಡಗೇರಾ ತಾಲ್ಲೂಕಿನ ಹಾಲಗೇರಾ ಸರ್ಕಾರಿ ಪ್ರೌಢಶಾಲೆ ಬಳಿ ರಸ್ತೆ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಗೋಡಿಹಾಳ ಗ್ರಾಮದ ಮಮತಾ ಹಾಗೂ ಉಳ್ಳೆಸೂಗೂರು ಗ್ರಾಮದ ಸುಭಾನಾ ಗಾಯಗೊಂಡವರು. ಜು.31ರಂದು ಬೆಳಿಗ್ಗೆ ಘಟನೆ ನಡೆದಿದ್ದು, ವಡಗೇರಾ ಕಡೆಯಿಂದ ಬಂದ ಬೈಕ್ (ಕೆಎ-33-ವಿ-3132) ಅನ್ನು ವಿಷ್ಣು ಕಾಡಂನೋರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಲಾಗಿದೆ. ಮಮತಾಗೆ ಗಂಭೀರ ಸೇರಿದಂತೆ ವಿವಿಧ ಗಾಯಗಳಾಗಿದ್ದು, ಸುಭಾನಾಗೂ ಗಾಯಗಳಾಗಿವೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಹಲ್ಲೆ: ಶಹಾಪುರ ತಾಲ್ಲೂಕಿನ ದರ್ಶನಾಪುರದಲ್ಲಿ ಮನೆ ಜಾಗದ ವಿಚಾರವಾಗಿ ಮಹಿಳೆಯೊಬ್ಬರ ಮೇಲೆ ಆರು ಮಂದಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಮಲ್ಲಮ್ಮ ಭೀಮಣ್ಣ ಹಾದಿಮನಿ ಹಲ್ಲೆಗೊಳಗಾದವರು. ಆ.6ರಂದು ಸಂಬಂಧಿಕರಾದ ದೇವಪ್ಪ, ಕಮಲಮ್ಮ, ತಿಪ್ಪಣ್ಣ, ಲಕ್ಷ್ಮಿ, ಹುಲಗಮ್ಮ ಹಾಗೂ ಮಲ್ಲಪ್ಪ ಅವರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ದೇವಪ್ಪ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದು, ಉಳಿದವರು ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗೋಗಿ ಹಾಗೂ ಶಹಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮಲ್ಲಮ್ಮ, ಮನೆ ಖಾಲಿ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಸೇರಿ ಆರು ಮಂದಿ ವಿರುದ್ಧ ಕಿರುಕುಳ ಆರೋಪ: ಮಹಿಳೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಪತಿ ಸೇರಿದಂತೆ ಆರು ಮಂದಿ ವಿರುದ್ಧ ಯಾದಗಿರಿ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಶಿಕ್ ಜಿಲ್ಲೆಯ ಎವಲಾ ಗ್ರಾಮದ ಫಾತೀಮಾ ದೂರು ನೀಡಿದ್ದಾರೆ. 2024ರಲ್ಲಿ ಸಮೀರ್ ಶೇಖ್ ಅವರನ್ನು ವಿವಾಹವಾಗಿದ್ದ ಅವರು, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಆರೋಪಿಸಿದ್ದಾರೆ. 2024ರ ಅ.14ರಂದು ಯಾದಗಿರಿಯ ದುಖಾನವಾಡಿಯಲ್ಲಿರುವ ತವರು ಮನೆಯಲ್ಲಿದ್ದಾಗಲೂ ಪತಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ ಆರೋಪ: ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಿದಲ್ಲದೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪತಿ ಸೇರಿದಂತೆ ನಾಲ್ವರ ವಿರುದ್ಧ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರಲ್ಲಿ ಬೆದರಿಸಿ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿಸಲಾಗಿತ್ತು ಎಂದು ಯುವತಿ ದೂರಿದ್ದಾರೆ. 18 ವರ್ಷ ತುಂಬುವ ಮುನ್ನವೇ ಪತಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. ಚಿನ್ನಾಭರಣ ಹಾಗೂ ಆಸ್ತಿ ತರುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದರು. ಚಿನ್ನ ಹಾಗೂ ಆಸ್ತಿ ತರದಿದ್ದರೆ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಸಿಗರೇಟ್‍ನಿಂದ ಸುಟ್ಟು, ಮೊಬೈಲ್ ಒಡೆದು ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಪತಿ ಸೇರಿದಂತೆ ನಾಲ್ವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೆÇೀಕ್ಸೊ, ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಬಿಎನ್‍ಎಸ್‍ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಮಟಕಾ ದಂಧೆ; ವ್ಯಕ್ತಿ ಬಂಧನ: ಕೆಂಭಾವಿ ಪೆÇಲೀಸರು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಸಂಖ್ಯೆ ಬರೆದುಕೊಂಡು ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಹುಣಸಗಿ ತಾಲ್ಲೂಕಿನ ಮುದ್ದೂರ(ಕೆ) ಗ್ರಾಮದ ಶರಣಪ್ಪ ಹಣಮಂತ ಕಟಬರ ಬಂಧಿತ. ಮುನ್ನೂರ(ಕೆ) ಗ್ರಾಮದ ಗ್ರಾಮ ಪಂಚಾಯಿತಿ ಸಮೀಪ ಮಟಕಾ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಿದ್ದಾರೆ. ಆರೋಪಿಯಿಂದ ?720 ನಗದು, ಮಟಕಾ ಸಂಖ್ಯೆ ಬರೆದ ಚೀಟಿಗಳು ಹಾಗೂ ಬಾಲ್‍ಪೆನ್ ಜಪ್ತಿ ಮಾಡಲಾಗಿದೆ. ಕೆಂಭಾವಿ ಠಾಣೆಯಲ್ಲಿ ಕೆಪಿ ಕಾಯ್ದೆಯ ಕಲಂ 78(3) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.