
ಯಾದಗಿರಿ: ತಾಲೂಕಿನ ಜಿನಿಕೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಹಾಗೂ ಇಕೋ ಕ್ಲಬ್ ರಚಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಮಕ್ಕಳ ಹಕ್ಕುಗಳು, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಸಾಯಪ್ಪ ಮಾತನಾಡಿ, ಮಕ್ಕಳು ಪರಿಸರದ ಬಗ್ಗೆ ಕಾಳಜಿ ಹೊಂದಬೇಕು. ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಥಿ ಸಂಸ್ಥೆಯ ಯಾದಗಿರಿ ಸಂಯೋಜಕ ನಾಗಪ್ಪ ಗಮಗ ಮಾತನಾಡಿ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ಕ್ಲಬ್‍ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವುದು, ನಿಯಮಿತವಾಗಿ ಸಮಿತಿ ಸಭೆ ನಡೆಸುವುದು, ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಕರೆತರುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಕ್ಕಳ ಹಕ್ಕುಗಳ ಕ್ಲಬ್ ಮೂಲಕ ಕೈಗೊಳ್ಳಬಹುದು ಎಂದು ತಿಳಿಸಿದರು.
ಇಕೋ ಕ್ಲಬ್ ಮೂಲಕ ಶಾಲೆಯಲ್ಲಿ ಕೈತೋಟ ನಿರ್ಮಾಣ, ಅದರ ನಿರ್ವಹಣೆ, ಸ್ವಚ್ಛತೆ ಹಾಗೂ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.
ಮಕ್ಕಳಲ್ಲಿ ನಾಯಕತ್ವ ಗುಣ, ಪರಿಸರ ಪ್ರೇಮ, ಸ್ವಚ್ಛತೆಯ ಅರಿವು ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಮತ್ತು ಇಕೋ ಕ್ಲಬ್ ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿಸಲಾಯಿತು.
ಕಾರ್ಯಕ್ರಮವನ್ನು ಸಹಶಿಕ್ಷಕ ಸಂಜಯ ನಿರೂಪಿಸಿದರು. ಶಿಕ್ಷಕ ಅಲ್ಲಾವುದ್ದಿನ್ ವಂದಿಸಿದರು. ಶಿಕ್ಷಕಿ ರಾಜೇಶ್ವರಿ, ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





























