Home ಮುಖಪುಟ ಸುದ್ದಿ ಪರಿಷತ್ ಚುನಾವಣೆ, ಮತದಾನ ಬಿರುಸು

ಪರಿಷತ್ ಚುನಾವಣೆ, ಮತದಾನ ಬಿರುಸು

ಬೆಂಗಳೂರು,ಅ೨೩ – ರಾಜ್ಯ ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು, ಮತದಾನ ಬಿರುಸಿನಿಂದ ಸಾಗಿದೆ. ಪದವೀಧರರ ಕ್ಷೇತ್ರದ ಎರಡು ಮತ್ತು ಶಿಕ್ಷಕರ ಕ್ಷೇತ್ರದ ಎರಡು ಸ್ಥಾನಗಳ ಚುನಾವಣೆಗೆ ಇಂದು ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಶೇ.೩೫.೧೭ ರಷ್ಟು ಮತದಾನವಾಗಿದೆ.

ಇಂದು ಬೆಳಿಗ್ಗೆ ಬೆಳಿಗ್ಗೆ ೮ ಗಂಟೆಯಿಂದ ಆರಂಭವಾದ ಮತದಾನ ಮಧ್ಯಾಹ್ನದವರೆಗೆ ಬಿರುಸಿನಿಂದ ಸಾಗಿತ್ತು. ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು.

ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತು. ಬೆಳಿಗ್ಗೆ ೮ ಗಂಟೆಗೆ ಮತದಾರರಯ ಮತಗಟ್ಡೆಗಳಿಗೆ ತೆರಳಿ ಮತದಾನ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಕುಟುಂಬ ಸಮೇತ ಆಗಮಿಸಿ ಬಸವೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದರು.ಅಲ್ಲದೆ, ಪಾತಿಮಾ ಹೈಸ್ಕೂಲಿನ ಮತಗಟ್ಟೆ ಕೇಂದ್ರದಲ್ಲಿ ಪತ್ನಿ ಸಮೇತ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಹಕ್ಕು ಚಲಾಯಿಸಿದರು.ಹುಬ್ಬಳ್ಳಿಯ ಜೆ.ಜಿ.ವಾಣಿಜ್ಯ ಕಾಲೇಜಿನಲ್ಲಿ ರಾಜ್ಯ ಸಭಾ ಸದಸ್ಯ ಎಂ ನಾಗರಾಜ್ ಮತದಾನ ಮಾಡಿ ಹೊರಬಂದು ಗೆಲುವಿನ ಗೆಲುವಿನ ಉತ್ಸಾಹ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲೆಯಲ್ಲಿ ಮಧ್ಯಾಹ್ನ ಶೇ.೨೭.೧೭ರಷ್ಟು ಮತದಾನವಾಗಿದೆ.

ಈಶಾನ್ಯ ಶಿಕ್ಷಕರ ಪರಿಷತ್ ಚುನಾವಣೆಗೆ ಇಂದು ಶಾಂತಿಯುತವಾಗಿ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇಕಡಾ ೩೩.೫೧% ಮತದಾನವಾಗಿದೆ.ಗದಗ ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ನಡೆದಿದು,ಮಧ್ಯಾಹ್ನದ ವೇಳೆಗೆ ಶೇ.೨೮.೬೪% ರಷ್ಟು ಮತದಾನವಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ ವೇಳೆ ಬೆಳಗ್ಗೆ ಎಂಟು ಗಂಟೆಯಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ತನಕ ಶೇ.೨೩.೩೮ರಷ್ಟು ಮತದಾನ ನಡೆದಿದೆ.
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ವೇಳೆ ಬೀದರ್ ಜಿಲ್ಲೆಯಲ್ಲಿ ಒಟ್ಟು ೩೩ ಮತಗಟ್ಟೆ ಕೇಂದ್ರಗಳಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು,ಮಧ್ಯಾಹ್ನದವರೆಗೆ ಶೇ.೨೪.೪೬ರಷ್ಟು ಮತದಾನವಾಗಿದೆ.
ದಾವಣಗೆರೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿರುಸಿನ ಮತದಾನವಾಗಿದ್ದು,ಇದುವರೆಗೂ ಶೇ.೩೦.೨೨ರಷ್ಟು ಮತದಾನವಾಗಿದ್ದು, ಮೂತಿರಪ್ಪ ಕಾಲೇಜು ಹಾಗೂ ಹೈಸ್ಕೂಲ್ ಮೈದಾನದ ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

ರಾಯಚೂರಿನ ಎಪಿಎಂಸಿ ಕಟ್ಟಡದಲ್ಲಿರುವ ಮತಗಟ್ಟೆಗೆ ಸಹಾಯಕ ಚುನಾವಣಾಧಿಕಾರಿ ಪೂವಿತಾ ಎಸ್. ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಬಳಿಕ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ವ್ಯವಸ್ಥೆ ಹಾಗೂ ಪ್ರಕ್ರಿಯೆಯನ್ನು ಪರಿಶೀಲಿಸಿದರು.ಶಾಂತಿಯುತ ಹಾಗೂ ಸುಸೂತ್ರ ಮತದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ
ಆಗ್ನೇಯ ಪದವೀಧರರ ಕ್ಷೇತ್ರದ ಮತದಾನ ನಡೆಯಲಿದ್ದು, ತುಮಕೂರು ಜಿಲ್ಲೆಯ ೮೦ ಕಡೆ ಮತದಾನವಾಗುತ್ತಿದ್ದು,ಮಧ್ಯಾಹ್ನದ ವರೆಗೆ ಶೇ.೨೩.೬೭ರಷ್ಟು ಮತದಾನವಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಅಗ್ನಿಯ ಪದವೀಧರರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿ ಹಾಲಿ ಇರುವ ವಿಧಾನಪರಿಷತ್ ಸದಸ್ಯರು ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಎಸ್.ವಿ. ಸಂಕನೂರ, ಕಾಂಗ್ರೆಸ್‌ನಿಂದ ಮೋಹನ ಲಿಂಬಿಕಾಯಿ ಸೇರಿದಂತೆ ೧೪ ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಶಶೀಲ್ ಜಿ. ನಮೋಶಿ, ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರು ಸೇರಿದಂತೆ ೧೩ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನ ಪುಟ್ಟಣ್ಣ, ಜೆಡಿಎಸ್‌ನ ಎ.ಪಿ. ರಂಗನಾಥ್ ಸೇರಿದಂತೆ ಆರು ಅಭ್ಯರ್ಥಿಗಳು
ಕಣದಲ್ಲಿದ್ದಾರೆ.ಆಗ್ನೆಯ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಂ. ಚಿದಾನಂದ ಗೌಡ ಬದಲು ಬಿಜೆಪಿ ಈ ಬಾರಿ ಕೆ.ಎಂ. ಸುರೇಶ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮರ್ ಸೇರಿದಂತೆ ೧೦ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಒಟ್ಟು ನಾಲ್ಕು ಸ್ಥಾನಗಳಿಗಾಗಿ ೪೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಸ್ಪರ್ಧೆ ತೀವ್ರವಾಗಿದ್ದು, ಯಾವ ಅಭ್ಯರ್ಥಿಗಳು ವಿಧಾನಪರಿಷತ್ತಿನ ಸದಸ್ಯ ಸ್ಥಾನವನ್ನು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.ಶಾಂತಿಯುತ ಮತದಾನ ನಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.