
ಮುದ್ದೇಬಿಹಾಳ: ಭಾರತೀಯ ಪರಂಪರೆಯಲ್ಲಿ ಶ್ರೀ ವಿಶ್ವಕರ್ಮರನ್ನು ಸೃಷ್ಟಿ, ನಿರ್ಮಾಣ, ಕಲೆ, ಕೌಶಲ್ಯ ಮತ್ತು ತಾಂತ್ರಿಕ ಜ್ಞಾನದ ಅಧಿದೇವತೆ ಎಂದು ಪೂಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ದೇವತೆಗಳಿಗಾಗಿ ಅದ್ಭುತ ನಗರಗಳು, ಅರಮನೆಗಳು, ಆಯುಧಗಳು ಹಾಗೂ ವಿವಿಧ ನಿರ್ಮಾಣಗಳನ್ನು ಸೃಷ್ಟಿಸಿದ ದೈವಿಕ ಶಿಲ್ಪಿ ಎಂಬ ಗೌರವ ಅವರಿಗೆ ಸಲ್ಲುತ್ತದೆ ಎಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮನೋಹರ ಶಿರವಾಳ ಅಭಿಪ್ರಾಯ ಪಟ್ಟರು.
ಪಟ್ಟಣದ ಹಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನ ಸೌಧದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ಸೃಷ್ಠಿಕರ್ತ ಭಗವಾನ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ವಿಶ್ವಕರ್ಮರ ಸಂದೇಶ ಕೇವಲ ಪೂಜೆಗೆ ಸೀಮಿತವಾಗಿಲ್ಲ. ಕಾಯಕವೇ ಕೈಲಾಸ ಎಂಬ ತತ್ವದಂತೆ ಪ್ರಾಮಾಣಿಕವಾದ ಶ್ರಮ, ಕೌಶಲ್ಯ ಮತ್ತು ಸೃಜನಶೀಲತೆಯಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂಬುದೇ ಅವರ ಜೀವನ ಸಂದೇಶದ ಸಾರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ನಿರ್ಮಾಣ ಕ್ಷೇತ್ರ ಹಾಗೂ ವಿವಿಧ ವೃತ್ತಿಗಳು ವೇಗವಾಗಿ ಬೆಳೆಯುತ್ತಿವೆ. ಈ ಎಲ್ಲ ಕ್ಷೇತ್ರಗಳ ಮೂಲದಲ್ಲಿ ಇರುವ ಕೌಶಲ್ಯ, ಕೈಚಳಕ, ಪರಿಶ್ರಮ ಮತ್ತು ಸೃಜನಶೀಲತೆಗೆ ನಾವು ಗೌರವ ನೀಡಬೇಕಾಗಿದೆ. ವಿಶ್ವಕರ್ಮ ಸಮಾಜದ ಪರಂಪರೆಯ ವೃತ್ತಿಗಳು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಕಮ್ಮಾರಿಕೆ, ಬಡಗಿತನ, ಚಿನ್ನಾಭರಣ ನಿರ್ಮಾಣ, ಶಿಲ್ಪಕಲೆ ಸೇರಿದಂತೆ ಅನೇಕ ಕೌಶಲ್ಯಗಳು ತಲೆತಲಾಂತರಗಳಿಂದ ನಮ್ಮ ಸಮಾಜದ ಹೆಮ್ಮೆ ಆಗಿವೆ. ಆದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಯುವಜನತೆ ಶಿಕ್ಷಣದ ಜೊತೆಗೆ ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕೌಶಲ್ಯಗಳನ್ನು ಕಲಿಯಬೇಕು. ನಮ್ಮ ಪಾರಂಪರಿಕ ಜ್ಞಾನವನ್ನು ಉಳಿಸಿಕೊಂಡು, ಆಧುನಿಕ ಜ್ಞಾನವನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸಬೇಕೆಂದರು.
ನಮ್ಮ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಯುವಕರು ಉದ್ಯೋಗ ಹುಡುಕುವುದರ ಜೊತೆಗೆ ಉದ್ಯಮಿಗಳಾಗಬೇಕು. ಮಹಿಳೆಯರು ಮತ್ತು ಯುವಜನತೆಗೆ ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಅಲ್ಲದೇ ಶ್ರೀ ವಿಶ್ವಕರ್ಮರ ಆರಾಧನೆಯ ನಿಜವಾದ ಅರ್ಥವೆಂದರೆ ಕೇವಲ ಪೂಜೆ ಮಾಡುವುದಲ್ಲ, ನಮ್ಮ ಕೈಯಲ್ಲಿರುವ ಕೌಶಲ್ಯವನ್ನು ಗೌರವಿಸಿ ಪರಿಶ್ರಮದಿಂದ ಬದುಕನ್ನು ಕಟ್ಟಿಕೊಳ್ಳುವುದು ಮತ್ತು ಸಮಾಜದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆ ನೀಡುವುದು. ಈ ಪವಿತ್ರ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡೋಣ. ಶ್ರೀ ಭಗವಾನ್ ವಿಶ್ವಕರ್ಮರು ಎಲ್ಲರಿಗೂ ಜ್ಞಾನ, ಕೌಶಲ್ಯ, ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದರು.
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಅವರು ವಿಶ್ವಕರ್ಮ ರ ಹಾಗೂ ಸಮಾಜದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ಉಪಾಧ್ಯಕ್ಷ ಈರಣ್ಣ ಬಡಿಗೇರ ನಿವೃತ್ತ ಕಂಟ್ರೋಲರ್. ಗಂಗಾಧರ ಸೋನಾರ, ಕಾರ್ಯದರ್ಶಿ ವೀರುಪಾಕ್ಷಿ ಪತ್ತಾರ, ಪ್ರಭಾಕರ ಪತ್ತಾರ (ಬಾವೂರ) ಅನಂದ ಪತ್ತಾರ, ಪ್ರಕಾಶ ಕವಡಿಮಟ್ಟಿ, ಈರಣ್ಣ ರಕ್ಕಸಗಿ, ಬಂಡೇಪ್ಪ ಪತ್ತಾರ, ಸದಾಶಿವ ಬಡಿಗೇರ, ಕಾಳಪ್ಪ ಹಳ್ಳೂರ, ಗುರು ಇಟಗಿ, ಶಿವು ಹಡಲಗೇರಿ, ಮೌನೇಶ ಇಟಗಿ, ಮೌನೇಶ ಬಡಿಗೇರ(ಡವಳಗಿ) ರಾಜು ಬಡಿಗೇರ, ಗುಂಡು ಬಡಿಗೇರ, ರಾಮಚಂದ್ರ ಬಡಿಗೇರ, ಬಸವರಾಜ ಪತ್ತಾರ, ಸುನೀಲ ಉಕ್ಕಲಿ, ಡಾ, ಈರಣ್ಣ ಲಿಂಗದಳ್ಳಿ, ಮೌನೇಶ ಹಂದ್ರಾಳ ಸೇರಿದಂತೆ ಹಲವರು ಇದ್ದರು.



























