ಯಾದಗಿರಿ,ಜು.೧೦-ಕರ್ನಾಟಕ ಪಬ್ಲಿಕ್ ಶಾಲೆಗಳ ಕಾರ್ಪೊರೇಟೀಕರಣ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿಯನ್ನು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‌ಓ ಜಿಲ್ಲಾ ಸಮಿತಿ ಖಂಡಿಸಿವೆ.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ಹಿರಿಯ ಚಿಂತಕ ಡಾ.ಕೆ.ಮರುಳಸಿದ್ದಪ್ಪ, ಶಿಕ್ಷಣ ತಜ್ಞ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ವಿ.ಪಿ, ಹಿರಿಯ ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ, ವಿಜಯಪುರದ ಅಕ್ಕಮಹಾದೇವಿ ಮಹಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ, ಹಿರಿಯ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ, ಲೇಖಕಿ ರೂಪ ಹಾಸನ, ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕಿರಣ್ ಗಾಜನೂರು, ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಎಐಡಿಎಸ್‌ಓ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು
ಈ ಸಂಬAಧ ಹೇಳಿಕೆಯೊಂದನ್ನು ನೀಡಿ, ರಾಜ್ಯ ಸರ್ಕಾರವು ಹೊರಡಿಸಿರುವ ಇತ್ತೀಚಿನ ಸರ್ಕಾರಿ ಆದೇಶ (ಸಂಖ್ಯೆ: ಇP ೮೧ ಇಉಔಗಿ ೨೦೨೫, ದಿನಾಂಕ: ೧೮.೦೬.೨೦೨೬) ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಏPS) ಸಂಬAಧಿಸಿದAತೆ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಅSಖ) ಮಾರ್ಗಸೂಚಿಗಳ ಹೆಸರಿನಲ್ಲಿ ಇಡೀ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳ ಪಾದದಡಿಗೆ ಇಡಲು ಹೊರಟಿರುವುದು ಅತ್ಯಂತ ಆತಂಕಕಾರಿ ಮತ್ತು ಖಂಡನಾರ್ಹ ಬೆಳವಣಿಗೆಯಾಗಿದೆ. ಈ ಆದೇಶದ ಪ್ರಕಾರ, ರಾಜ್ಯದ ೧,೦೦೦ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸುವ ನೆಪದಲ್ಲಿ ಕಾರ್ಪೊರೇಟ್ ಹೂಡಿಕೆಯನ್ನು ಮುಕ್ತವಾಗಿ ಆಹ್ವಾನಿಸಲಾಗುತ್ತಿದೆ. ಇದು ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಗೆ ಸೀಮಿತವಾಗಿರದೆ, ಶಾಲೆಯ ಆಡಳಿತ, ಪಠ್ಯಕ್ರಮ ಮತ್ತು ಬೋಧನಾ ಪ್ರಕ್ರಿಯೆಯಲ್ಲೇ ನೇರ ಕಾರ್ಪೊರೇಟ್ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಮಾರ್ಗಸೂಚಿಗಳ ಅನ್ವಯ ಖಾಸಗಿ ಸಂಸ್ಥೆಗಳು ಮೂರು ವರ್ಷಗಳ ಅವಧಿಗೆ ತಮಗೆ ಬೇಕಾದ ಶಿಕ್ಷಕರನ್ನು ನಿಯೋಜಿಸಬಹುದು ಮತ್ತು ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ‘ಕೌಶಲ್ಯ ಆಧಾರಿತ’ ಪಠ್ಯಕ್ರಮವನ್ನು ತಾವೇ ರೂಪಿಸಬಹುದು. ಅಂದರೆ, ಶಾಲೆಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆಯನ್ನು ಬೆಳೆಸುವ ಜ್ಞಾನದೇಗುಲಗಳಾಗುವ ಬದಲು, ಕಾರ್ಪೊರೇಟ್ ಕಂಪನಿಗಳಿಗೆ ಬೇಕಾದ ಅಗ್ಗದ ಕಾರ್ಮಿಕರನ್ನು ಸಿದ್ಧಪಡಿಸುವ ತರಬೇತಿ ಕೇಂದ್ರಗಳಾಗಿ ಬದಲಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳ ಆವರಣದಲ್ಲಿ ಖಾಸಗಿ ಕಂಪನಿಗಳ ಸಹ-ಬ್ರ‍್ಯಾಂಡಿAಗ್ (ಅo-bಡಿಚಿಟಿಜiಟಿg) ಮಾಡಲು, ಅಂದರೆ ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಕಂಪನಿಯ ಹೆಸರನ್ನು ಸೇರಿಸಲು ಅನುಮತಿ ನೀಡಿರುವುದು ಸಾರ್ವಜನಿಕ ಸ್ವತ್ತನ್ನು ಕಂಪನಿಗಳ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸುವ ತಂತ್ರವಾಗಿದೆ. ಶಾಲಾ ಆಡಳಿತ ಮಂಡಳಿಗಳಲ್ಲಿ ಕಾರ್ಪೊರೇಟ್ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವ ಮೂಲಕ, ಪೋಷಕರು ಮತ್ತು ಸ್ಥಳೀಯ ಸಮುದಾಯ ಒಳಗೊಂಡಿರುವ ‘ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ’ಯ (Sಆಒಅ) ಪ್ರಜಾಸತ್ತಾತ್ಮಕ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ. ಕೆಪಿಎಸ್ ಕಾರ್ಪಸ್ ಫಂಡ್ ರಚನೆಯು ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರವು ವ್ಯವಸ್ಥಿತವಾಗಿ ಹಿಂದೆ ಸರಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸೂಕ್ತ ಅನುದಾನ ನೀಡದೆ, ಇಂತಹ ಉದಾರ ದೇಣಿಗೆಗಳ ಮೇಲೆ ಶಾಲೆಗಳನ್ನು ಅವಲಂಬಿತವಾಗಿಸುವುದು ಅಪಾಯಕಾರಿ. ಒಪ್ಪಂದದ ಅವಧಿ ಮುಗಿದ ನಂತರ ಕಂಪನಿಗಳು ಕೈತೊಳೆದುಕೊಂಡರೆ ಆ ಶಾಲೆಗಳ ಮತ್ತು ಅಲ್ಲಿನ ಶಿಕ್ಷಕರ ಭವಿಷ್ಯವೇನು ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ. ಲಾಭದ ದೃಷ್ಟಿ ಇಟ್ಟುಕೊಂಡೇ ಬಂಡವಾಳ ಹೂಡುವ ಕಾರ್ಪೊರೇಟ್ ಸಂಸ್ಥೆಗಳು ನಗರ ಪ್ರದೇಶದ ಶಾಲೆಗಳಿಗೆ ಮುಗಿಬೀಳುತ್ತವೆಯೇ ಹೊರತು, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಾಲೆಗಳನ್ನು ಕೇಳುವವರೇ ಇರುವುದಿಲ್ಲ, ಇದು ಶೈಕ್ಷಣಿಕ ಅಸಮಾನತೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಇಡೀ ಪ್ರಕ್ರಿಯೆಯು ಕೇವಲ ಆಕಸ್ಮಿಕವಲ್ಲ; ಇದು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ವರ್ಷಗಳ ಹಿಂದೆಯೇ ಸಿದ್ಧವಾಗಿದ್ದ ಬಿರ್ಲಾ-ಅಂಬಾನಿ ಸಮಿತಿ ವರದಿಯ (೨೦೦೦) ಶಿಫಾರಸುಗಳು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಓಇP ೨೦೨೦) ರ ಮುಂದುವರಿದ ಭಾಗವಾಗಿದೆ. ‘ಸಾರ್ವಜನಿಕ-ಖಾಸಗಿ-ದಾನಿ ಸಹಭಾಗಿತ್ವ’ (PPP) ಎಂಬ ಮುಖವಾಡದಡಿ ಶಿಕ್ಷಣವನ್ನು ಮೂಲಭೂತ ಹಕ್ಕಿನ ಸ್ಥಾನದಿಂದ ಕೆಳಗಿಳಿಸಿ, ಕಾರ್ಪೊರೇಟ್ ಕರುಣೆಯ ಭಿಕ್ಷೆಯನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಶಿಕ್ಷಣದ ಅನನ್ಯತೆ, ಆಡಳಿತಾತ್ಮಕ ಮತ್ತು ಪಠ್ಯಕ್ರಮದ ಸ್ವಾತಂತ್ರ‍್ಯವನ್ನು ಹರಾಜಿಗಿಟ್ಟಿರುವ ಈ ಸಿಎಆರ್ ಮಾರ್ಗಸೂಚಿಗಳನ್ನು ಸರ್ಕಾರವು ತಕ್ಷಣವೇ ಹಿಂಪಡೆಯಬೇಕು. ರಾಜ್ಯದ ಜನತೆಯ ಆಗ್ರಹದ ಮೇರೆಗೆ ರಚನೆಯಾದ ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಈ ಕುರಿತು ಸರ್ಕಾರ ವಿದ್ಯಾರ್ಥಿ ಸಂಘಟನೆಗಳು, ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಒಂದು ಚರ್ಚೆ ಏರ್ಪಡಿಸಬೇಕು. ಶಿಕ್ಷಣ ನೀಡುವುದು ಪ್ರಜಾಪ್ರಭುತ್ವ ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಅದಕ್ಕೆ ಅಗತ್ಯವಿರುವ ಸಂಪೂರ್ಣ ಹಣವನ್ನು ಬಜೆಟ್ ಮೂಲಕವೇ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.





























