
ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಇತ್ತೀಚೆಗೆ ನೀಡಲಾಗಿರುವ ದೂರು ಸತ್ಯಕ್ಕೆ ದೂರವಾಗಿದ್ದು, ಅದನ್ನು ಮಾನ್ಯ ಮಾಡಬಾರದು ಎಂದು ಆಗ್ರಹಿಸಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಪತ್ರಕರ್ತರು, ಡಿವಿಜಿ ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 95 ವರ್ಷಗಳ ಇತಿಹಾಸವಿದ್ದು, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಘಟಕಗಳನ್ನು ಹೊಂದಿರುವ ದೇಶದ ಬೃಹತ್ ಪತ್ರಕರ್ತರ ಸಂಘಟನೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಹೆಸರಿನಲ್ಲಿ ದೂರು ನೀಡಿರುವುದು ಖಂಡನೀಯ. ಸಂಘದಲ್ಲಿ ಸದಸ್ಯತ್ವ ಪಡೆಯಲು ಸಾಧ್ಯವಾಗದ ಕೆಲವರು ಪ್ರತ್ಯೇಕ ಕೂಟ ಕಟ್ಟಿಕೊಂಡು ಸಂಘದ ವಿರುದ್ಧ ನಿರಂತರವಾಗಿ ಅಪಪ್ರಚಾರ ಹಾಗೂ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಂಗಭೂಮಿ ಹಿನ್ನೆಲೆಯಿಂದ ಬೆಳೆದು ಬಂದಿರುವ ಶಿವಾನಂದ ತಗಡೂರು ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದನ್ನು ಸಹಿಸದೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸಂಘವು ಕಾರ್ಮಿಕ ಕಾಯ್ದೆಯನ್ವಯ ತನ್ನ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕಾಲಕಾಲಕ್ಕೆ ಲೆಕ್ಕಪತ್ರ ಹಾಗೂ ಹಣಕಾಸಿನ ವಹಿವಾಟುಗಳನ್ನು ಪಾರದರ್ಶಕವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷ ಸಾಮಾನ್ಯ ಸಭೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸಮಿತಿ ಸಭೆಗಳನ್ನು ನಡೆಸಲಾಗುತ್ತಿದೆ. ಶಿವಾನಂದ ತಗಡೂರು ಅವರ ಅವಧಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ?1.1 ಕೋಟಿ ಠೇವಣಿ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ನೂರಾರು ಪತ್ರಕರ್ತರ ಕುಟುಂಬಗಳಿಗೆ ತಲಾ ?5 ಲಕ್ಷ ಪರಿಹಾರ ದೊರಕಿಸುವಲ್ಲಿ ತಗಡೂರು ಅವರ ಪ್ರಯತ್ನ ಮಹತ್ವದ್ದಾಗಿದೆ ಎಂದು ತಿಳಿಸಿದರು.
“ಆರೋಪಗಳನ್ನು ಮಾಡುತ್ತಿರುವವರು ಸಂಕಷ್ಟದಲ್ಲಿದ್ದ ಎಷ್ಟು ಪತ್ರಕರ್ತರ ಕುಟುಂಬಗಳಿಗೆ ನೆರವು ನೀಡಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ” ಎಂದು ಪ್ರಶ್ನಿಸಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಕೆಯುಡಬ್ಲ್ಯೂಜೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಸಹಯೋಗ ನೀಡುತ್ತಿರುವ ಕೆಯುಡಬ್ಲ್ಯೂಜೆ ಸರ್ಕಾರದ ಮಾನ್ಯತೆ ಹೊಂದಿರುವ ಪತ್ರಕರ್ತರ ಸಂಘಟನೆಯಾಗಿದೆ. ಹೀಗಾಗಿ ಸಂಘದ ಚುನಾಯಿತ ರಾಜ್ಯಾಧ್ಯಕ್ಷರ ವಿರುದ್ಧ ಉದ್ದೇಶಪೂರ್ವಕವಾಗಿ ನೀಡಿರುವ ದೂರನ್ನು ಪರಿಗಣಿಸಬಾರದು. ತೇಜೋವಧೆ ಮಾಡುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹನುಮಂತ ಪಿ., ಮಹೇಶ್ ಕಲಾಲ್, ಗಣೇಶ್ ಪಾಟೀಲ್, ಮಹೇಶ್ ಗಣೇರ್, ನಾಗಪ್ಪ ನಾಯ್ಕಲ್, ಬಸವರಾಜ ಕರೆಗಾರ, ರಾಘವೇಂದ್ರ ಹಾರಣಗೇರಾ, ಕೆ.ಬಿ. ರಾಘವೇಂದ್ರ, ದೇವರಾಜ ನಾಯಕ, ರವಿರಾಜ ಕಂದಳ್ಳಿ, ನಾಗರಾಜ ಬೀರನೂರ, ಮಾನಯ್ಯ ಗಾಳಿನೋರ, ಸುಧೀರ್ ಕೋಟೆ, ಶರಭು ನಾಟೇಕಾರ್, ಬೀರಲಿಂಗಪ್ಪ ಕಿಲ್ಲನಕೇರಾ, ಮಲ್ಲಿಕಾರ್ಜುನ, ಭೀಮಣ್ಣ ವಡವಟ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.





























