Home ಮುಖಪುಟ ಸುದ್ದಿ ಪ್ರೇಮ ಪ್ರಕರಣ ನೀಡಿದ ಸುಳಿವು ಬಂದೂಕು ಕಾರ್ಖಾನೆ ಜಾಲ ಪತ್ತೆ

ಪ್ರೇಮ ಪ್ರಕರಣ ನೀಡಿದ ಸುಳಿವು ಬಂದೂಕು ಕಾರ್ಖಾನೆ ಜಾಲ ಪತ್ತೆ

ಬೆಂಗಳೂರು,ಜು.೨೩: ಯುವಕನೊಬ್ಬನ ಏಕಪಕ್ಷೀಯ ಪ್ರೇಮ ವ್ಯವಹಾರ ಹಾಗೂ ಆತನಿಗೆ ಎದುರಾದ ಬೆದರಿಕೆಯೊಂದು ಕೊನೆಗೆ ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಪ್ರಮುಖ ದೇಶಿ ಪಿಸ್ತೂಲ್ ತಯಾರಿಕಾ ಜಾಲವನ್ನೇ ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.


ಅಕ್ರಮವಾಗಿ ದೇಶಿ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಮುಖ್ಯ ಆರೋಪಿಯನ್ನು ನಗರದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.


ಮಧ್ಯಪ್ರದೇಶದ ಧಾರ್ ಜಿಲ್ಲೆಯ ಸಿಂಘಾನಾ ನಿವಾಸಿ ಜಂಜೀರ್ ಅಲಿಯಾಸ್ ದಿನೇಶ್ ಪಟೀದಾರ್ (೩೦+) ಬಂಧಿತ ಬಂದೂಕು ಸರಬರಾಜುದಾರ ಎನ್ನಲಾಗಿದೆ.
ಫೆಬ್ರವರಿ ತಿಂಗಳಲ್ಲಿ ಜಯನಗರದ ನಿವಾಸಿ ಸೈಯದ್ ಮಸೂದ್ (೨೬) ಎಂಬಾತನನ್ನು ಸಿಸಿಬಿ ಪೊಲೀಸರು ಬಂದೂಕು ಹಾಗೂ ೫೦ ಸಜೀವ ಗುಂಡುಗಳ ಸಮೇತ ವಶಕ್ಕೆ ಪಡೆದಿದ್ದರು.


ಮಸೂದ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಕುಟುಂಬದವರಿಂದ ವಿರೋಧ ವ್ಯಕ್ತವಾಗಿತ್ತು. ಅವರ ದಾಳಿಯಿಂದ ರಕ್ಷಣೆ ಪಡೆಯಲು ಅಕ್ರಮವಾಗಿ ಪಿಸ್ತೂಲ್ ಖರೀದಿಸಲು ಮುಂದಾಗಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.


ಮಧ್ಯಪ್ರದೇಶದ ಜಾವೇದ್ ಆಲಂ (೧೯) ಎಂಬ ಏಜೆಂಟ್ ಮೂಲಕ ೪೫,೦೦೦ ರೂ. ನೀಡಿ ಮಸೂದ್ ಈ ಪಿಸ್ತೂಲ್ ಪಡೆದುಕೊಂಡಿದ್ದ. ಇವರಿಬ್ಬರನ್ನು ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಒಪ್ಪಂದ ನಡೆಯುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದರು.


ಏಜೆಂಟರ ವಿಚಾರಣೆ ವೇಳೆ ಅಸಲಿ ಬಂದೂಕು ತಯಾರಕ ದಿನೇಶ್ ಪಟೀದಾರ್ ಹೆಸರು ಹೊರಬಿದ್ದಿತ್ತು. ಸಿಸಿಬಿ ಪೊಲೀಸರು ತನ್ನ ಬೆನ್ನತ್ತಿರುವುದು ತಿಳಿಯುತ್ತಿದ್ದಂತೆ ಪಟೀದಾರ್ ತಲೆಮರೆಸಿಕೊಂಡಿದ್ದ.ಬೆನ್ನಟ್ಟಿದ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಮ್ ಅವರ ನೇತೃತ್ವದ ತಂಡ, ಸ್ಥಳೀಯ ಖಚಿತ ಮಾಹಿತಿ ಮೇರೆಗೆ ಕೋರ್ಟ್ ವಾರಂಟ್ ಪಡೆದು ಮಧ್ಯಪ್ರದೇಶದಲ್ಲಿರುವ ಆರೋಪಿಯ ಮನೆ ಮೇಲೆಯೇ ದಾಳಿ ನಡೆಸಿದೆ. ಪಟೀದಾರ್ ತನ್ನ ಮನೆಯನ್ನೇ ಅಕ್ರಮ ಬಂದೂಕು ತಯಾರಿಕಾ ಘಟಕವನ್ನಾಗಿ ಮಾಡಿಕೊಂಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ.

ದಾಳಿ ವೇಳೆ ಬಂದೂಕು ತಯಾರಿಕೆಗೆ ಬಳಸುತ್ತಿದ್ದ ಕಚ್ಚಾ ಸಾಮಗ್ರಿಗಳು ಹಾಗೂ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಧ್ಯಪ್ರದೇಶ ಪೊಲೀಸರು ಸಹ ಆರೋಪಿಯ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.