Home ಜಿಲ್ಲೆ ಕಲಬುರಗಿ ನಾಟಿ ಔಷಧಿ ಸೇವಿಸಿ ಮೃತಪಟ್ಟ ನಾಲ್ವರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಲು ಸಿಐಟಿಯು ಒತ್ತಾಯ

ನಾಟಿ ಔಷಧಿ ಸೇವಿಸಿ ಮೃತಪಟ್ಟ ನಾಲ್ವರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಲು ಸಿಐಟಿಯು ಒತ್ತಾಯ

ಕಲಬುರಗಿ : ಸೇಡಂ ತಾಲೂಕಿನ ಇಮಡಾಪುರದಲ್ಲಿ ನಾಟಿ ಔಷಧಿ ಸೇವಿಸಿ ಮೃತಪಟ್ಟ ನಾಲ್ವರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಘೋಷಿತ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಒತ್ತಾಯಿಸಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿರುವ ಫೆಡರೇಶನ್, ಘಟನೆಯಲ್ಲಿ ಶಹಾಬಾದ್ ಗ್ರಾಮದ ಗಣೇಶ್ ಬಾಬು ರಾಠೋಡ, ಬುರ್ಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು, ಮದುಕಲ್ ಗ್ರಾಮದ ನಾಗೇಶ್ (ಭೀಮಪ್ಪ ಅವರ ಪುತ್ರ) ಹಾಗೂ ಭೀಮನಹಳ್ಳಿ ಗ್ರಾಮದ ಮನೋಜ್ (ಲಕ್ಷಣ ಅವರ ಪುತ್ರ) ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಘಟನೆ ನಡೆದು ಸುಮಾರು 9, 10 ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಮೃತರ ಕುಟುಂಬಗಳಿಗೆ ಸರ್ಕಾರದಿಂದ ನೀಡಬೇಕಾದ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆದ್ದರಿಂದ ಸಚಿವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಪ್ರಕರಣದ ಪರಿಶೀಲನೆ ನಡೆಸಿ, ಮೃತರ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಫೆಡರೇಶನ್ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಅಧ್ಯಕ್ಷ ಶ್ರೀಮಂತ್ ಬಿರಾದಾರ, ಸಹ-ಸಂಚಾಲಕ ನಾಗಪ್ಪ ರಾಯಚೂರಕರ, ಬಾಬು ಹೂವಿನಹಳ್ಳಿ, ನೀಲೇಶ್ ರಾಥೋಡ್ ಇದ್ದರು.