
ಕಲಬುರಗಿ,ಜೂ.16-“ಬಾಲ ಕಾರ್ಮಿಕ ಪದ್ಧತಿ ನಮ್ಮ ಸಮಾಜದ ಮೇಲೆ ಕಳಂಕವಾಗಿ ಉಳಿದಿರುವ ಗಂಭೀರ ಸಾಮಾಜಿಕ ಪಿಡುಗಾಗಿದೆ. ಮಕ್ಕಳು ದೇಶದ ಭವಿಷ್ಯದ ನಿರ್ಮಾತೃಗಳು. ಅವರ ಕೈಯಲ್ಲಿ ಪುಸ್ತಕ, ಪೆನ್ನು ಹಾಗೂ ಕನಸುಗಳು ಇರಬೇಕೇ ಹೊರತು ದುಡಿಮೆಯ ಉಪಕರಣಗಳು ಇರಬಾರದು. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯಕರ ವಾತಾವರಣದಲ್ಲಿ ಬದುಕುವ ಹಕ್ಕು ಹಾಗೂ ಗೌರವಯುತ ಜೀವನ ನಡೆಸುವ ಹಕ್ಕು ನಮ್ಮ ಸಂವಿಧಾನ ನೀಡಿದೆ ಎಂದು ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಹೇಳಿದರು.
ಸುಜಯ್ ಎಜುಕೇಶನಲ್ & ವೆಲ್ಫೇರ್ ಸೊಸೈಟಿ ಹಾಗೂ ಕಲಬುರಗಿ ಶಿಕ್ಷಣ ಸಂಸ್ಥೆ, ಸಂಯುಕ್ತ ಆಶ್ರಯದಲ್ಲಿ ವಿಠ್ಠಲ್ ರಾವ್ ತುಕಾರಾಂ ಸುತಾರವೇ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸದ್ದ ವಿಶ್ವ ಬಾಲ ಕಾರ್ಮಿಕ ನಿರ್ಮೂಲನೆ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳಿಂದ ಮಕ್ಕಳನ್ನು ದುಡಿಮೆಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಕೇವಲ ಸರ್ಕಾರ ಅಥವಾ ನ್ಯಾಯಾಂಗದ ಪ್ರಯತ್ನ ಸಾಕಾಗುವುದಿಲ್ಲ. ಪೆÇೀಷಕರು, ಶಿಕ್ಷಕರು, ಸಮಾಜಸೇವಕರು ಹಾಗೂ ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಸಮಾಜದ ಅಭಿವೃದ್ಧಿಗೆ ಹೂಡಿಕೆ ಮಾಡಿದಂತೆ. ಬಾಲ ಕಾರ್ಮಿಕ ನಿರ್ಮೂಲನೆ ಎಂಬುದು ಕೇವಲ ಒಂದು ದಿನದ ಆಚರಣೆಯಲ್ಲ; ಅದು ಪ್ರತಿಯೊಬ್ಬರ ನೈತಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಬದ್ಧತೆಯಾಗಿದೆ” ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುನಿಲಕುಮಾರ ಎಚ್.ವಂಟಿ ಅವರು, “ಬದುಕು ಕೇವಲ ನನ್ನದು ಎನ್ನುವ ಮನೋಭಾವದಿಂದ ಹೊರಬಂದು ಸಮಾಜದ ಬದುಕಾಗಿ ಪರಿವರ್ತನೆಗೊಂಡಾಗ ಮಾತ್ರ ಬಾಲ ಕಾರ್ಮಿಕ ನಿರ್ಮೂಲನೆ ಎಂಬ ಮಹತ್ತರ ಗುರಿ ಸಾಧಿಸಲು ಸಾಧ್ಯ. ಸರ್ಕಾರದ ಘೋಷಣೆಗಳು ಯಶಸ್ವಿಯಾಗಬೇಕಾದರೆ ಪೆÇೀಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳ ಹಕ್ಕುಗಳನ್ನು ಕಾಪಾಡಬೇಕು. ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ದುಡಿಮೆಯ ಉಪಕರಣಗಳಲ್ಲ; ಮಕ್ಕಳ ಕಣ್ಣಲ್ಲಿ ಕನಸು ಇರಬೇಕು, ಕಣ್ಣೀರು ಅಲ್ಲ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಸಂತೋಷ್ ಕುಲಕರ್ಣಿ ಅವರು ಮಾತನಾಡಿ, “ಬಾಲ ಕಾರ್ಮಿಕ ನಿರ್ಮೂಲನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಸಮಾಜದಲ್ಲಿ ಜಾಗೃತಿ ಮೂಡಿದಾಗ ಮಾತ್ರ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಮತ್ತು ಗೌರವಯುತ ಜೀವನ ದೊರೆಯಲು ಸಾಧ್ಯ. ಮಕ್ಕಳ ಭವಿಷ್ಯವನ್ನು ರಕ್ಷಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಕಾಂತ ಮೇಳಕುಂದಿ, ಹಿರಿಯ ನ್ಯಾಯವಾದಿ ಲಿಂಗರಾಜ್ ಮಹಾಗಾಂವ್, ಪರಮೇಶ್ವರ ದೇಸಾಯಿ, ದೇವೇಂದ್ರಪ್ಪ ಗಣಮುಖಿ ಹಾಗೂ ಪಾಂಡುರಂಗ ಕಟಕೆ ಅವರು ಉಪಸ್ಥಿತರಿದ್ದರು.
ಅದೇ ರೀತಿ ವಿಠ್ಠಲ್ ರಾವ್ ತುಕಾರಾಂ ಸುತಾರವೇ ಸ್ಮಾರಕ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಗುರುಗಳಾದ ಪ್ರಫುಲ್ಲಾ ಕುಮಾರಿ, ಮಲಾರೇಶ್ವರಿ ಬಿ.ಎನ್., ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶ್ವ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು. “ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ದುಡಿಮೆಯ ಉಪಕರಣಗಳಲ್ಲ; ಮಕ್ಕಳ ಕಣ್ಣಲ್ಲಿ ಕನಸು ಇರಬೇಕು, ಕಣ್ಣೀರು ಅಲ್ಲ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.


























