
ಬೆಂಗಳೂರು, ಜು. ೧೯- ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರ ಅಂತ್ಯಕ್ರಿಯೆ ನಾಳೆ ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಸದ್ಯ ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲೇ ಸಾರ್ವಜನಿಕ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.ಬಳಿಕ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚನ್ನಮ್ಮ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಅಂತಿಮ ಯಾತ್ರೆ ಮಾರ್ಗ ಮಧ್ಯೆ ೧೦ ಕಡೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಅಲ್ಲದೆ,ಬೆಂಗಳೂರಿನಿಂದ ಹೊರಟ ಅಂತಿಮ ಯಾತ್ರೆ ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್ ಪೋಸ್ಟ್, ಕುಣಿಗಲ್ ಕ್ರಾಸ್, ಬೆಳ್ಳೂರು ಕ್ರಾಸ್, ಕದಬಳ್ಳಿ ಕ್ರಾಸ್, ಹಿರಿಸಾವೆ, ಚನ್ನರಾಯಪಟ್ಟಣ, ಎಲೆಯೂರು, ಹಾಸನ ಡೈರಿ ಸರ್ಕಲ್, ಭೂನಳ್ಳಿ ಕ್ರಾಸ್, ಶಾಂತಿ ಗ್ರಾಮ, ಎನ್.ಆರ್. ಸರ್ಕಲ್ ಮೂಲಕ ಮೊಸಳೆ ಹೊಸಳ್ಳಿಗೆ ತಲುಪಿತು.
ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ರಾತ್ರಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ ೭ ರಿಂದ ೯,೩೦ ಗಂಟೆಯವರೆಗೆ ಅಂತಿಮ ದರ್ಶನ ನಡೆಯಲಿದೆ. ಇದಾದ ಬಳಿಕ ಹೊಳೆನರಸೀಪುರದಿಂದ ಪಾರ್ಥಿವ ಶರೀರ ರವಾನೆಯಾಗಲಿದೆಬೆಳಗ್ಗೆ ೧೧:೩೦ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಕ್ಯಾತನಹಳ್ಳಿಯಲ್ಲಿ ಚನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ ೨ ರಿಂದ ಸಂಜೆ ೪:೧೫ ಗಂಟೆವರೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.
ಈ ನಡುವೆ ಚನ್ನಮ್ಮ ವಿಧಿವಶರಾದ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಸಿ.ಎನ್.ಬಾಲಕೃಷ್ಣ ಸ್ಥಳದಲ್ಲಿ ಮೊಕ್ಕಾಂ ಹೂಡಿ ಸಿದ್ಧತಾ ಕಾರ್ಯ ಪರಿಶೀಲಿಸುತ್ತಿದ್ದಾರೆ. ರಾತ್ರಿ ೮ ಗಂಟೆಯಿಂದ ನಾಳೆ ಬೆಳಗ್ಗೆ ೧೧ ಗಂಟೆಯವರೆಗೆ ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ನಂತರ ಪೂಜಾ ಕಾರ್ಯಗಳು ನಡೆಯಲಿವೆ.ಬಳಿಕ ಹರದನಹಳ್ಳಿ ಗ್ರಾಮದ ಸಮೀಪದ ಕ್ಯಾತನಹಳ್ಳಿ ಬಳಿಗೆ ಪಾರ್ಥಿವ ಶರೀರ ತರಲಾಗುತ್ತದೆ.ಕೆಲಕಾಲ ಅಂತಿಮ ದರ್ಶನಕ್ಕೆ ಇರಿಸಿ ಮಧ್ಯಾಹ್ನ ೨ ಗಂಟೆ ನಂತರ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದ್ದಾರೆ.
ಇದಲ್ಲದೆ,ಚನ್ನಮ್ಮ ನಿಧನ ಹಿನ್ನೆಲೆ ನಾಳೆವರೆಗೂ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಇದಕ್ಕು ಮುನ್ನ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಆಗಮಿಸಿದ ಚನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಶೋಭಾ ಕರದ್ಲಾಂಜೆ, ವಿ.ಸೋಮಣ್ಣ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಡಾ.ಅಶ್ವತ್ ನಾರಾಯಣ್, ಹಿರಿಯ ನಟ ದೊಡ್ಡಣ್ಣ, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್, ನಟಿ ಪೂಜಾ ಗಾಂಧಿ ಸೇರಿದಂತೆ ಶಾಸಕರು, ವಿವಿಧ ಪಕ್ಷಗಳ ನಾಯಕರು, ಮುಖಂಡರು, ವಿವಿಧ ಕ್ಷೇತ್ರದ ಹಲವು ಗಣ್ಯರು,ಸಾರ್ವಜನಿಕರು ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಭವ್ಯ ಇತಿಹಾಸದ ಮೌನ ಸಾಕ್ಷಿ ಚನ್ನಮ್ಮನವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ, ಕೈಮುಗಿದು ಶ್ರದ್ಧಾಂಜಲಿ ಅರ್ಪಿಸಿದರು.
ದಶಕಗಳ ಕಾಲ ದೇವೇಗೌಡರ ಹೋರಾಟದ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ಮಹಾತಾಯಿಯ ಅಗಲಿಕೆಗೆ ಮೌನವಾಗಿ ದುಃಖಪಟ್ಟರು. ಈ ವೇಳೆ ತಾಯಿ ಚನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದಾರೆಯಾದರೂ ನಾನೆಂದರೆ ಅವರಿಗೆ ತುಸು ಜಾಸ್ತಿ ಪ್ರೀತಿ ಇತ್ತು. ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ಅವರು ನನಗೆ ಹಿತವಚನ ನೀಡಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾವುಕರಾದರು.ಜೊತೆಗೆ ಅಮ್ಮನನ್ನು ನೆನೆದು ರೇವಣ್ಣ ಕೂಡ ಭಾವುಕರಾಗಿದ್ದಾರೆ. ತಾಯಿ ಚನ್ನಮ್ಮ ನನಗೆ ದೇವತೆ ಸಮಾನ. ನನ್ನ ದೇವರನ್ನೇ ಕಳೆದುಕೊಂಡೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಎಷ್ಟೋ ಜನರಿಗೆ ಅನ್ನ ಹಾಕಿದ ಕೈಅವರದು. ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಮಾತನಾಡಿಸಿದ್ದೆ. ವೈದ್ಯರು ಚನ್ನಮ್ಮ ಗುಣಮುಖ ಆಗ್ತಾರೆ ಎಂದಿದ್ದರು. ಆದರೆ ಅವರು ಬದುಕಿಬರಲಿಲ್ಲ ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ.
ಇದಲ್ಲದೆ, ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿ ಚನ್ನಮ್ಮರಿಗೆ ಅಂತಿಮ ನಮನ ಸಲ್ಲಿಸಿದರು. ದೇವೇಗೌಡರ ಬಳಿ ಕುಳಿತು ಸಾಂತ್ವನ ಹೇಳಿದರು. ಭಾವುಕರಾಗಿದ್ದ ದೇವೇಗೌಡರ ಭುಜದ ಮೇಲೆ ಕೈ ಇಟ್ಟು ಸಂತೈಸಿದರು. ಬಳಿಕ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಬಳಿ ತೆರಳಿ ಸಾಂತ್ವನ ಹೇಳಿದರು.ಬಳಿಕ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಸೇರಿ ಹಲವು ರಾಜಕೀಯ ಪಕ್ಷಗಳ ಮುಖಂಡರು ಪದ್ಮನಾಭನಗರದ ನಿವಾಸದಲ್ಲಿ ಚನ್ನಮ್ಮರಿಗೆ ಅಂತಿಮ ನಮನ ಸಲ್ಲಿಸಿ, ದೇವೇಗೌಡರು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಚನ್ನಮ್ಮ ಪಾರ್ಥೀವ ಶರೀರ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಹಿನ್ನೆಲೆ ಪೊಲೀಸ್ ಬಿಗಿಭದ್ರತೆ ನಿಯೋಜಿಸಲಾಗಿತ್ತು.ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸರ ನಿಯೋಜನೆ ಹಾಗೂ ವಿಐಪಿ, ವಿವಿಐಪಿ ಮೈದಾನಕ್ಕೆ ಎಂಟ್ರಿ, ಎಕ್ಸಿಟ್ ಪ್ರವೇಶ ದ್ವಾರಗಳ ನಿಗದಿ ಮಾಡಲಾಗಿತ್ತು. ಸಾರ್ವಜನಿಕರ ಎಂಟ್ರಿ, ಎಕ್ಸಿಟ್ ಗೇಟ್ ಗಳು ನಿಗದಿ ಮೈದಾನ ಉದ್ದಗಲಕ್ಕೂ ೩೫೦ ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು


































