Home ಮುಖಪುಟ ಸುದ್ದಿ ವಿಜಯನಗರದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ

ವಿಜಯನಗರದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ

ಹೊಸಪೇಟೆ, ಅ.೫: ಮುಂಗಾರು ಮಳೆಯ ಕೊರತೆಯಿಂದ ವಿಜಯನಗರ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ, ಬೆಳೆ ಹಾನಿ ಹಾಗೂ ಕುಡಿಯುವ ನೀರಿನ ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಸೋಮವಾರ ಜಿಲ್ಲೆಗೆ ಭೇಟಿ ನೀಡಿ ವಿವಿಧ ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಅಜಿತ್ ಕುಮಾರ್ ಸಾಹು ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಜಿಲ್ಲೆಯ ಹರಪನಹಳ್ಳಿ ಹಾಗೂ ಹಡಗಲಿ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆ, ಕೃಷಿ ಬೆಳೆಗಳ ಹಾನಿ, ನೀರಿನ ಲಭ್ಯತೆ ಹಾಗೂ ಕೆರೆ ಪುನರುಜ್ಜೀವನ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿತು. ಈ ವೇಳೆ ಅಧಿಕಾರಿಗಳು ಸ್ಥಳೀಯ ರೈತರೊಂದಿಗೆ ನೇರವಾಗಿ ಚರ್ಚಿಸಿ, ಬರದಿಂದ ಎದುರಾಗಿರುವ ಸಮಸ್ಯೆಗಳು ಹಾಗೂ ಪರಿಹಾರದ ನಿರೀಕ್ಷೆಗಳ ಕುರಿತು ಮಾಹಿತಿ ಪಡೆದರು.

ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಆರು ತಾಲೂಕುಗಳನ್ನು ಪ್ರಸಕ್ತ ಸಾಲಿನಲ್ಲಿ ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡವು ಜಿಲ್ಲೆಯ ಪರಿಸ್ಥಿತಿಯ ಪ್ರತ್ಯಕ್ಷ ಅಧ್ಯಯನ ಕೈಗೊಂಡಿದೆ. ಬರದಿಂದ ಉಂಟಾಗಿರುವ ಬೆಳೆ ನಷ್ಟ ಹಾಗೂ ರೈತರ ಸಂಕಷ್ಟವನ್ನು ಸ್ಥಳದಲ್ಲೇ ಪರಿಶೀಲಿಸಿ, ರಾಜ್ಯ ಸರ್ಕಾರ ಸಲ್ಲಿಸಿರುವ ಬರನಷ್ಟದ ಅಂದಾಜು ಮತ್ತು ಪರಿಹಾರದ ಬೇಡಿಕೆಗೆ ಪೂರಕವಾಗಿ ವಾಸ್ತವಾಂಶಗಳನ್ನು ದಾಖಲಿಸುವ ಉದ್ದೇಶದಿಂದ ತಂಡ ಭೇಟಿ ನೀಡಿದೆ.

ದಾವಣಗೆರೆಯಿಂದ ವಿಜಯನಗರ ಜಿಲ್ಲೆಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡವನ್ನು ಜಿಲ್ಲಾಡಳಿತದ ಅಧಿಕಾರಿಗಳು ದುಗ್ಗಾವತಿ ಗ್ರಾಮದಲ್ಲಿ ಸ್ವಾಗತಿಸಿದರು. ಬಳಿಕ ತಂಡವು ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮಕ್ಕೆ ತೆರಳಿ ವಿಬಿಜಿ ರಾಮ್‌ಜಿ ಕೆರೆ ಪುನರುಜ್ಜೀವನ ಕಾಮಗಾರಿಯನ್ನು ಪರಿಶೀಲಿಸಿತು.

ಮಾರ್ಗಮಧ್ಯೆ ಸಿಂಗಾರ ತೋಟ ಹಾಗೂ ಕಣವಿಹಳ್ಳಿ ಪ್ರದೇಶಗಳಲ್ಲಿ ರಾಗಿ ಬೆಳೆಗಳನ್ನು ವೀಕ್ಷಿಸಿದ ಅಧಿಕಾರಿಗಳು, ಬೆಳೆಗಳ ಸ್ಥಿತಿ, ಮಳೆಯ ಕೊರತೆಯಿಂದ ಉಂಟಾಗಿರುವ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ರಸ್ತೆಯಲ್ಲೇ ರೈತರು ನಡೆಸುತ್ತಿದ್ದ ಒಕ್ಕಣೆ ಕಾರ್ಯವನ್ನೂ ತಂಡ ಪರಿಶೀಲಿಸಿತು.

ನಂತರ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಬರದಿಂದ ಹಾನಿಗೊಳಗಾಗಿರುವ ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳ ಜಮೀನುಗಳನ್ನು ಪರಿಶೀಲಿಸಿತು. ಬೆಳೆಗಳ ಸ್ಥಿತಿ, ಉತ್ಪಾದನೆ ಕುಸಿತ ಹಾಗೂ ಮಳೆಯ ಕೊರತೆಯಿಂದ ರೈತರಿಗೆ ಆಗಿರುವ ಆರ್ಥಿಕ ನಷ್ಟದ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ರೈತರು ಕೇಂದ್ರ ತಂಡದ ಅಧಿಕಾರಿಗಳಿಗೆ ತಮ್ಮ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಬರಪರಿಹಾರ ಕ್ರಮಗಳು ಸೇರಿದಂತೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.ಇಟ್ಟಿಗಿಯಿಂದ ಬಳಿಕ ತಂಡವು ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಮೈದೂರು ಗ್ರಾಮಕ್ಕೆ ತೆರಳಿತು. ಇಲ್ಲಿ ಮೆಕ್ಕೆಜೋಳ, ರಾಗಿ, ಕಡಲೆಕಾಯಿ, ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಪ್ರಮಾಣವನ್ನು ಪರಿಶೀಲಿಸಿತು.

ಅಲ್ಲದೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಮತ್ತು ಕೊರತೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಹಾಗೂ ರೈತರೊಂದಿಗೆ ಚರ್ಚಿಸಿ ನೀರಿನ ಸಮಸ್ಯೆ, ಕೃಷಿಗೆ ನೀರಿನ ಕೊರತೆ ಹಾಗೂ ಬರದಿಂದ ಉಂಟಾಗಿರುವ ಇತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಕೇಂದ್ರ ತಂಡವು ಜಿಲ್ಲೆಯ ಒಟ್ಟಾರೆ ಬರ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿತು. ಜಿಲ್ಲೆಯಲ್ಲಿ ಮಳೆಯ ಪ್ರಮಾಣ, ಬೆಳೆ ಪ್ರದೇಶ, ಹಾನಿಗೊಳಗಾದ ಬೆಳೆಗಳ ವಿವರ, ಕುಡಿಯುವ ನೀರಿನ ಪರಿಸ್ಥಿತಿ, ಬರದಿಂದ ಉಂಟಾಗಿರುವ ನಷ್ಟ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.
ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಅಪರ ಜಿಲ್ಲಾಧಿಕಾರಿ ಪಿ.ಎನ್. ಬಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ತಂಡದಲ್ಲಿ ಕೇಂದ್ರ ನೀತಿ ಆಯೋಗದ ಲೆಫ್ಟಿನೆಂಟ್ ಕರ್ನಲ್ ಅಮರಿಂದರ್ ಸಿಂಗ್, ಕೇಂದ್ರ ಜಲಶಕ್ತಿ ಸಚಿವಾಲಯದ ಡಾ. ಜೆ. ಹರ್ಷ, ಕೇಂದ್ರ ಕೃಷಿ ಇಲಾಖೆಯ ಉಪನಿರ್ದೇಶಕ ಚೆಟ್ ರಾಮ್ ಮೀನಾ ಸೇರಿದಂತೆ ಅಧಿಕಾರಿಗಳು ಇದ್ದರು.

ವಿಜಯನಗರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ಕೇಂದ್ರ ತಂಡವು ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿತು. ಅಲ್ಲಿಂದ ಬೆಂಗಳೂರಿಗೆ ತೆರಳಿತು.