
ಧಾರವಾಡ, ಸೆ.೧೦: ಗೌರಿ-ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಆಚರಿಸುವಂತೆ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಸೂಚಿಸಿದರು.
ಅವರು ನಗರದ ಪೊಲೀಸ್ ಹೆಡ್‌ಕ್ವಾಟರ್ಸದ ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಭವನದಲಿ ಗೌರಿ-ಗಣೇಶ ಹಬ್ಬದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲರೂ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಡಿ.ಜೆ. ಬಳಕೆಯಿಂದ ಉಂಟಾಗಬಹುದಾದ ಶಬ್ದ ಮಾಲಿನ್ಯ ಹಾಗೂ ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಅವರು ಸಭೆಯಲ್ಲಿ ಜಾಗೃತಿ ಮೂಡಿಸಿದರು. ಡಿ.ಜೆ. ಬದಲಾಗಿ ಸಾಂಪ್ರದಾಯಿಕ ವಾದ್ಯವೃಂದಗಳನ್ನು ಬಳಸಿಕೊಂಡು ಗಣೇಶೋತ್ಸವ ಆಚರಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಉಪವಿಭಾಗದ ಡಿ.ಎಸ್.ಪಿ ವಿನೋಧ ಮುಕ್ತೆದಾರ ಅವರು ಎಲ್ಲರನ್ನು ಸ್ವಾಗತಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಎಲ್ಲ ಸಮುದಾಯ ಮುಖಂಡರು, ಫ್ಲೆಕ್ಸ್ ಹಾಗೂ ಬ್ಯಾನರ್ ಮುದ್ರಣ ಅಂಗಡಿಗಳ ಮಾಲೀಕರು, ಡಿ.ಜೆ. ಸಿಸ್ಟಮ್ ಮಾಲೀಕರು, ಆರೋಗ್ಯ, ಲೋಕೋಪಯೋಗಿ, ಹೆಸ್ಕಾಂ, ಪರಿಸರ, ಅಬಕಾರಿ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.































