Home ಮುಖಪುಟ ಸುದ್ದಿ ಕೆರೆಗೆ ಬಿದ್ದ ಕಾರು: ಮೂವರ ಸಾವು

ಕೆರೆಗೆ ಬಿದ್ದ ಕಾರು: ಮೂವರ ಸಾವು

ಮಡಿಕೇರಿ: ಅ.೨೧: ಕೆರೆ ಬದಿಯ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡ ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಶಿಲ್ಪಿ ಎಸ್ಟೇಟ್ ನಲ್ಲಿ ನೆನ್ನೆ ರಾತ್ರಿ ನಡೆದಿದೆ.

ಘಟನೆಯಲ್ಲಿ ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ವಿಜೇಶ್ (೩೬), ಆವರ ಪತ್ನಿ ಪಮಿತ (೩೪) ಹಾಗೂ ಮಗು ಲಿಯ (೪) ಈ ದುರಂತದಲ್ಲಿ ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ.


ಇವರುಗಳು ನೆನ್ನೆ ರಾತ್ರಿ ಸಿದ್ಧಾಪುರಕ್ಕೆ ಬಂದವರು ದೊಡ್ಡ ಮಗಳನ್ನು ನೆಂಟರ ಮನೆಯಲ್ಲಿ ಬಿಟ್ಟು ಬಾಣಂಗಾಲದಲ್ಲಿರುವ ತೋಟದ ವಸತಿ ಗೃಹಕ್ಕೆ ಹಿಂತಿರುಗುತ್ತಿದ್ದರು. ತೋಟದ ನಡುವೆ ಇರುವ ಕೆರೆಯ ಏರಿ ಮೇಲಿನ ರಸ್ತೆ ಮೇಲೆ ಕಾರು ಚಲಿಸುತ್ತಿದ್ದಾಗ ಒಂದು ಟಯರ್ ಏರಿಯಿಂದ ಜಾರಿದ ಪರಿಣಾಮ ಕಾರು ಅನಾಮತ್ತಾಗಿ ಕೆರೆಯೊಳಗೆ ಜಾರಿ ಬಿದ್ದಿದೆ ಎಂದು ಹೇಳಲಾಗಿದೆ.


ಕತ್ತಲಾದ್ದರಿಂದ ವಿಷಯ ಯಾರಿಗೂ ಅರಿಯಲಾಗದೆ ಸಹಾಯಕ್ಕೆ ಯಾರೂ ಧಾವಿಸಲಾಗಿರಲಿಲ್ಲ. ಇಂದು ಬೆಳಿಗ್ಗೆ ಕಾರ್ಮಿಕರು ಕೆರೆಯಲ್ಲಿ ಮುಳುಗಿದ್ದ ಕಾರನ್ನು ಕಂಡಿದ್ದು, ಅದರ ಒಳಗೆ ಈ ಮೂವರು ಉಸಿರು ಚೆಲ್ಲಿರುವುದು ಗೋಚರಿಸಿದೆ. ಬಳಿಕ ಮೃತ ದೇಹಗಳನ್ನು ಮೇಲಕ್ಕೆ ತೆಗೆದು ಸಿದ್ದಾಪುರ ಆಸ್ಪತ್ರೆಗೆ ಸಾಗಿಸಲಾಯಿತು.

ಈ ದಂಪತಿ ಬಾಣಂಗಾಲಕ್ಕೆ ಹಿಂತಿರುಗುವ ಸಂದರ್ಭದಲ್ಲಿ ತಮ್ಮ ಹಿರಿಯ ಪುತ್ರಿಯನ್ನು ಸಿದ್ದಾಪುರದಲ್ಲಿರುವ ನೆಂಟರ ಮನೆಯಲ್ಲಿ ಬಿಟ್ಟು ಹೋಗಿದ್ದರಿಂದ ಈ ಮಗುವಿನ ಜೀವ ಉಳಿದಿದೆ. ಇಲ್ಲವಾಗಿದ್ದಲ್ಲಿ ಈ ದುರಂತದಲ್ಲಿ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿತ್ತು.