
ಚಿತ್ತಾಪುರ,ಅ.21- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪುರ ಹಾಗೂ ಸುವನಾ ಪ್ರಕಾಶನ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ತಾಪೂರಿನ ವರುಣ ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ರಂದು ನಡೆದ ಉಮೇಶ್ ಬಾಬು ಎಂ ಸಾಸಾಬಾಳ್ ವಿರಚಿತ ಮೌನಡಂಗುರ ಕವನ ಸಂಕಲನ, ಭಾವ ಬಂಧುರ ಮತ್ತು ಭಾವಭ್ರಂಗ ಗಜಲ್ ಸಂಕಲನ ಕಾವ್ಯ ಕೃತಿಗಳ ಲೋಕಾರ್ಪಣಾ ಸಮಾರಂಭದಲ್ಲಿ 96ರ ಹರೆಯದ ಹಿರಿಯ ಮಕ್ಕಳ ಸಾಹಿತಿ ಏ. ಕೆ. ರಾಮೇಶ್ವರ ರವರು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ ಸಾಹಿತಿ ಉಮೇಶ್ ಬಾಬು ರವರ ಗಜಲ್ ಗಳು ಓದಿದಾಗ ನನಗನ್ನಿಸಿದ್ದು ನಾನು ಮಕ್ಕಳ ಸಾಹಿತಿಯಾಗಿ ಇಷ್ಟು ವರ್ಷ ಬರವಣಿಗೆ ಮಾಡಿದರು ಕೂಡ ಗಜಲ್ ಬರೆಯಬೇಕೆಂಬ ಆಸೆಯಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಯವರು ಮಾತನಾಡುತ್ತಾ ಪ್ರಾಚೀನ ವಿಶ್ವವಿದ್ಯಾಲಯವಿರುವ ನಾಗಾವಿ ಘಟಿಕ ಸ್ಥಾನ ಇದು ಸಾಮಾನ್ಯವಾದ ನೆಲವಲ್ಲ ಇದು ಪ್ರಾಚೀನ ಕಾಲದಲ್ಲಿಯೇ ಸಾಹಿತ್ಯಿಕವಾಗಿ ಉಚ್ಛ್ರಾಯ ಸ್ಥಿತಿಯಲ್ಲಿರುವಂತಹ ಪುಣ್ಯಭೂಮಿ, ಹಾಗೆಯೇ ಹಲವಾರು ದಶಕಗಳಿಂದ ಸಾಹಿತ್ಯ ಪರಿಷತ್ತಿನ ಅನೇಕ ಚಟುವಟಿಕೆಗಳು ಇಲ್ಲಿ ನಡೆದಿವೆ ಎಂದು ನುಡಿಯುತ್ತಾ ಉಮೇಶ್ ಬಾಬುರವರು ರಚಿಸಿರುವ ಈ ಕೃತಿಗಳು ಬಹಳ ಪ್ರೌಡ ಮಟ್ಟದ ಕವನ ಹಾಗೂ ಗಜಲ್ ಗಳಾಗಿವೆ ಎಂದು ನುಡಿದರು.
ಮೌನದಂಗೂರ ಮೌನ ಡಂಗುರ ಕೃತಿ ಪರಿಚಯ ಮಾಡಿದ ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಸೇರಿ ಸೇಡಂ ರವರು ಮಾತನಾಡುತ್ತಾ ಈ ಕೃತಿಯ ಹೆಸರಾದ ಮೌನ ಡಂಗುರದ ಹೆಸರಿನ ಅರ್ಥಪೂರ್ಣತೆಯನ್ನು ವಿವರಿಸುತ್ತಾ ಕೃತಿಯಲ್ಲಿ ಲೇಖಕರು ತಮ್ಮ ತಂದೆಗೆ ಅರ್ಪಣೆ ಮಾಡಿ ಬರೆದ ಕವನದ ವಿವರಣೆಯನ್ನು ಕೊಡುತ್ತಾ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೆರಡು ಗಜಲ್ ಕೃತಿಗಳ ಪರಿಚಯ ಮಾಡಿಕೊಟ್ಟ ಖ್ಯಾತ ಕವಿ/ ಸಾಹಿತಿ/ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಮಾತನಾಡುತ್ತಾ ನೋಡಿದರೆ ಸಾಧಾರಣ ವ್ಯಕ್ತಿತ್ವದ ಚಿತ್ರ ಕಲಾವಿದನ ಆಂತರ್ಯದಲ್ಲಿ ಇಂತಹ ಅದ್ಭುತ ರಸಿಕತೆಯ ಕವಿ ಮನಸ್ಸು ಅಡಗಿದೆ ಎಂದು ಊಹಿಸಲೂ ಅಸಾಧ್ಯ ಅಂತಹ ಅತ್ಯುತ್ತಮ ಮಟ್ಟದ ಗಜಲ್ ಗಳನ್ನು ರಚಿಸಿದ್ದಾರೆ ಎಂದು ಒಂದೊಂದು ಗಜಲ್ ಗಳನ್ನು ಬಿಚ್ಚಿಟ್ಟು, ಕೃತಿಗಳನ್ನು ಯಾವಾಗ ಕೊಂಡು ಓದೋಣ ಎನ್ನುವ ಹಂಬಲವನ್ನು ಸಭಿಕರ ಮನದಲ್ಲಿ ಮೂಡುವಂತೆ ಮಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ದಿಗ್ಗಾಂವ ಹಂಚಗ್ರಹ ಹಿರೇಮಠದ ಸಿದ್ದವೀರ ಶಿವಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಸುಧಾಕರ್ ರಾವ್ ಸರಾಫ ಆಗಮಿಸಿದ್ದರು.
ಕೃತಿಗಳ ಲೋಕಾರ್ಪಣೆಯನ್ನು ಖ್ಯಾತ ಚಿತ್ರಕಲಾವಿದ ನಾಡೋಜ ಡಾ.ಜೆ ಎಸ್. ಖಂಡೆರಾವ ಹಾಗೂ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್, ಖ್ಯಾತ ನ್ಯಾಯವಾದಿ ಚಂದ್ರಶೇಖರ್ ಅವಂಟಿ ಮಾಡಿದರು.
ಕೃತಿಗಳ ಪರಿಚಯ ಮಾಡಿದಂತಹ ಖ್ಯಾತ ಕವಿ ಸಾಹಿತಿಗಳಾದ ಸೇಡಂನ ಲಿಂಗಾರೆಡ್ಡಿ ಸೇರಿ ಮತ್ತು ಮಹಿಪಾಲ ರೆಡ್ಡಿ ಮುನ್ನೂರ ಕೃತಿಗಳ ಪರಿಚಯ ಮಾಡಿದರು.
ಬಿಎಆರ್ಸಿ ನಿವೃತ್ತ ಆಡಳಿತಾಧಿಕಾರಿ ರಾಮಕೃಷ್ಣ ಕುಲಕರ್ಣಿ, ಸಾಹಿತಿ ಎ.ಕಮಲಾಕರ್ ಸುರಪುರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೇಂದ್ರಬಿಂದುವಾದ ಚಿತ್ರ ಕಲಾವಿದ ಸಾಹಿತಿ ಉಮೇಶ್ ಬಾಬು ಎಮ್ ಸಾಸಾ ಬಾಳ್, ತಮ್ಮ ಅನಿಸಿಕೆ ಹಂಚಿಕೊಂಡರು. ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಶಾಬಾದಕರ್ ಲೇಖಕರ ಪರಿಚಯ ಮಾಡಿದರು.
ಪ್ರಸ್ತಾವಿಕ ನುಡಿಯನ್ನು ಶಂಕರ ಬಿರಾದಾರ್ ನುಡಿದರು. ಸಂಗಮೇಶ್ವರ ರೋಣದ ಸ್ವಾಗತ ಕೋರಿದರು, ಕಾರ್ಯಕ್ರಮದ ನಿರೂಪಣೆಯನ್ನು ಸಾಧನ ನಟರಾಜ್ ಶಿಲ್ಪಿ ಮಾಡಿದರೆ, ಅಧ್ಯಕ್ಷತೆಯನ್ನು ಚಿತ್ತಾಪುರ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ ಗುರುಮಿಟಕಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಿಗ್ಗಾಂವ್ ಗ್ರಾಮದ ಅನೇಕ ಹಿರಿಯ ಹಾಗೂ ಯುವ ಮುಖಂಡರು ಕಲಬುರ್ಗಿ ನಗರದಿಂದ ಆಗಮಿಸಿದ ಹಿರಿಯ ಹಾಗೂ ಯುವ ಚಿತ್ರ/ಶಿಲ್ಪ ಕಲಾವಿದರು, ಮೊಗಲಾ, ಸಾತನೂರು, ದಿಗ್ಗಾವ್, ಗ್ರಾಮದ ಅನೇಕ ಹಿತೈಷಿಗಳು ಹಾಗೂ ಚಿತ್ತಾಪುರ ನಗರದ ಅನೇಕ ಗಣ್ಯರು ಮತ್ತು ಲೇಖಕರಾದ ಉಮೇಶ್ ಬಾಬುರವರ ಪರಿವಾರದವರೊಂದಿಗೆ ಅನೇಕರು ಉಪಸ್ಥಿತರಿದ್ದರು.
ಶರಣಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿ ಕೋಟೇಶ್ವರ ರೇಶ್ಮಿ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಸಾಹಿತಿ ಉಮೇಶ್ ಬಾಬುರವರ ಅನೇಕ ಅಭಿಮಾನಿಗಳು ಸನ್ಮಾನ, ಸತ್ಕಾರ, ಮಾಡಿದರು.






















