
ಕಲಬುರಗಿ, ನ 04:ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಯಲ್ಲಿ ಮಾನ್ಯ ಮುಖ್ಯಮಂತ್ರಿಯವರ 100 ದಿನಗಳ “Job Linked 100 ITIs” ತರಬೇತಿ ಅಭಿಯಾನಕ್ಕೆ ಕಲಬುರಗಿ ವಿಭಾಗೀಯ ಕಚೇರಿಯ ಉಪನಿರ್ದೇಶಕರಾದ ಡಾ.ರುಬಿನಾ ಪರ್ವೀನ ಅವರು ಸೋಮವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ತರಬೇತಿದಾರರ ಕೌಶಲ್ಯಾಭಿವೃದ್ಧಿಗೋಸ್ಕರವೇ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಐ.ಟಿ.ಐ. ಮತ್ತು ಕೈಗಾರಿಕೋದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಅದ್ಭುತವಾದ ತರಬೇತಿ ಕಾರ್ಯಕ್ರಮವನ್ನು ತಯಾರಿಸಲಾಗಿದೆ. ಈ ತರಬೇತಿ ಕಾರ್ಯಕ್ರಮವು ಉಚಿತವಾಗಿದ್ದು, ಉತ್ತಮ ಕೈಗಾರಿಕೋದ್ಯಮಗಳಲ್ಲಿ ಯುವಕರಿಗೆ ಒಳ್ಳೆಯ ಉದ್ಯೋಗ ದೊರಕಲು ಅನುಕೂಲವಾಗುತ್ತದೆ ಎಂದರು.
ಈ ಕಾರ್ಯಕ್ರಮದಡಿ Job Linked Campus ಮಿಷನ್ನಲ್ಲಿ ಒಂದು ಐಟಿಐಗೆ 03 ರಿಂದ 04 ಕೈಗಾರಿಕೆಗಳನ್ನು ಮ್ಯಾಪ್ ಮಾಡಿ 300 ಕೈಗಾರಿಕೋದ್ಯಮಗಳ ಪಾಲುದಾರಿಕೆಯೊಂದಿಗೆ 02 ವರ್ಷಗಳಲ್ಲಿ ಪ್ರತಿ ವರ್ಷ 5,000 ವಿದ್ಯಾರ್ಥಿಗಳಿಗೆ ಒಟ್ಟು 10,000 ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು, 100 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು Job Linked Campus ಗಳನ್ನಾಗಿ ಪರಿವರ್ತಿಸಲು ಸರ್ಕಾರವು ಆದೇಶಿಸಿದ್ದು, ಕಾರ್ಯಕ್ರಮದಲ್ಲಿ ಆಯ್ದ ವೃತ್ತಿಗಳ ಕಿರಿಯ ತರಬೇತಿ ಅಧಿಕಾರಿಗಳು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿರುವ 2ನೇ ವರ್ಷದ ತರಬೇತಿದಾರರಿಗೆ ಹೆಚ್ಚುವರಿಯಾಗಿ ಸದರಿ Module ಗಳಲ್ಲಿ ನವೆಂಬರ್-2026 ರಿಂದ ಏಪ್ರಿಲ್-2027ರೊಳಗೆ ತರಬೇತಿ ನೀಡಬೇಕಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಮುರಲಿಧರ ರತ್ನಗಿರಿ ಮಾನ್ಯ ಮುಖ್ಯಮಂತ್ರಿಯವರ 100 ದಿನಗಳ ಕಾರ್ಯಕ್ರಮವು ಬಹಳ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ತರಬೇತಿದಾರರ ಕೌಶಲ್ಯಾಭಿವೃದ್ಧಿಯ ಉನ್ನತೀಕರಣಕ್ಕಾಗಿ ಯೋಜಿಸಲಾಗಿದೆ. ಕೈಗಾರಿಕೋದ್ಯಮಗಳ ಅವಶ್ಯಕತೆಗನುಸಾರವಾಗಿ ಪಠ್ಯಕ್ರಮವನ್ನು ರೂಪಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ತರಬೇತಿಗಾಗಿ ಸೌಲಭ್ಯ ಇಲ್ಲದಿದ್ದಲ್ಲಿ ನಗರದ ಬೇರೆ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲಾಗುತ್ತದೆ. ಸಂಸ್ಥೆಯ ತರಬೇತಿದಾರರು ಆಸಕ್ತಿಯಿಂದ ಕಲಿತು ಈ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗೀಯ ಕಛೇರಿಯ ಸಹಾಯಕ ನಿರ್ದೇಶಕ ಟಿ.ಕೆ.ಯರಗಲ್, ಸಂಸ್ಥೆಯ ಆಡಳಿತಾಧಿಕಾರಿಗಳಾದ ಸುರೇಶ ವಗ್ಗೆ, ಸಂಸ್ಥೆಯ ತರಬೇತಿ ಅಧಿಕಾರಿಗಳು, ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ಸಂಸ್ಥೆಯ ತರಬೇತಿದಾರರು ಉಪಸ್ಥಿತರಿದ್ದರು.





















