Home ಜಿಲ್ಲೆ ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಗೃಹ ಸಚಿವರಿಗೆ ಮನವಿ

ನ್ಯಾಯವಾದಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಗೃಹ ಸಚಿವರಿಗೆ ಮನವಿ

ಮುದ್ದೇಬಿಹಾಳ: ರಾಜ್ಯದಲ್ಲಿ ನ್ಯಾಯವಾದಿಗಳ ಮೇಲಿನ ಹಲ್ಲೆ, ಹತ್ಯೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ, ಸಮಗ್ರ ನ್ಯಾಯವಾದಿಗಳ ರಕ್ಷಣಾ ಕಾಯ್ದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿ ಮುದ್ದೇಬಿಹಾಳದ ಹಿರಿಯ ಶ್ರೇಣಿ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯವಾದಿಗಳ ಸಂಘದ ವತಿಯಿಂದ ಸಾಂಕೇತಿಕವಾಗಿ ದಿ. 3 ರಂದು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರರಂದು ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಎಂ.ಎಸ್. ಬಾಗೇವಾಡಿ ಅವರ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಎಸ್. ಮಾಲಗತ್ತಿ ಅವರು, ರಾಜ್ಯದ ವಿವಿಧೆಡೆ ನ್ಯಾಯವಾದಿಗಳ ಮೇಲೆ ಹಲ್ಲೆ ಹಾಗೂ ಹತ್ಯೆಯಂತಹ ಘಟನೆಗಳು ನಡೆಯುತ್ತಿರುವುದು ನ್ಯಾಯವಾದಿಗಳ ಸುರಕ್ಷತೆ ಕುರಿತು ಗಂಭೀರ ಆತಂಕ ಮೂಡಿಸಿದೆ ಎಂದರು.
ಬೆಂಗಳೂರಿನ ವೈಟ್‍ಫೀಲ್ಡ್‍ನ ನ್ಯಾಯವಾದಿ ಮಂಜುನಾಥ, ಅನ್ನಪೂರ್ಣೇಶ್ವರಿ ನಗರದ ನ್ಯಾಯವಾದಿ ಶ್ರೀರಾಮ್ ಅವರ ಹತ್ಯೆ ಹಾಗೂ ಗೌರಿಬಿದನೂರಿನ ನ್ಯಾಯವಾದಿ ವೆಂಕಟರಮಣ ಸಣ್ಣಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಯನ್ನು ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಇನ್ನೋರ್ವ ನ್ಯಾಯವಾದಿಗಳಾದ ಎನ್.ಆರ್. ಮೊಕಾಶಿ ಮಾತನಾಡಿ, ನ್ಯಾಯವಾದಿಗಳ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಮೂಡಿಸುವಂತಿವೆ. ಕಾರಣ ನ್ಯಾಯವಾದಿಗಳು ಯಾವುದೇ ಭಯವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಲು ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಕಾರಣ ನ್ಯಾಯವಾದಿಗಳ ಮೇಲಿನ ಹಲ್ಲೆ, ಹತ್ಯೆ ಹಾಗೂ ದೌರ್ಜನ್ಯಗಳನ್ನು ತಡೆಯಲು ಈಗಿರುವ ರಕ್ಷಣಾ ಕಾನೂನನ್ನು ಮತ್ತಷ್ಟು ಬಲಪಡಿಸಿ, ಸಮಗ್ರ ನ್ಯಾಯವಾದಿಗಳ ರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಬಿ. ದೊಡ್ಡಮನಿ ಅವರು ನ್ಯಾಯವಾದಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಮಾತನಾಡಿ ದೌರ್ಜನ್ಯ ತಡೆಯುವ ಕುರಿತು ಸಂಭಂದಿಸಿದ ಸಚಿವರು ಗಣನೆಗೆ ತೆಗೆದುಕೊಂಡು ತಪ್ಪಿಸ್ಥರ ಮೇಲೆ ಕೂಡಲೇ ಕ್ರಮ ಕೈಕೊಳ್ಳಬೇಕೆಂದು ಮನವಿ ಪತ್ರದಲ್ಲಿ ಬರೆದ ವಿಷಯವನ್ನು ಪ್ರಸ್ತಾಪಿಸಿದರು.
ರಾಜ್ಯ ನ್ಯಾಯವಾದಿಗಳ ಪರಿಷತ್ತು ಹಾಗೂ ಬೆಂಗಳೂರು ನ್ಯಾಯವಾದಿಗಳ ಸಂಘದ ನಿರ್ದೇಶನದ ಮೇರೆಗೆ ನಡೆದ ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಬಿ.ಆರ್. ನಾಡಗೌಡ, ಎಸ್.ಆರ್. ಸಜ್ಜನ, ಎಂ.ಎಸ್. ಅಮಲ್ಯಾಳ, ಎಂ.ಆರ್. ಪಾಟೀಲ, ಎಂ.ಬಿ. ಬಿರಾದಾರ, ಎಂ.ಎ. ಬಿದರಕುಂದಿ, ಐ.ಕೆ. ಸಾಸನೂರ, ಆರ್.ಬಿ. ಪಾಟೀಲ, ಎಂ.ಸಿ. ವಡವಡಗಿ, ಹಸೀನಾ ಅನಂತಪುರ, ಶ್ರೀದೇವಿ ಎಸ್. ರಾಜೂರ, ಐ.ಕೆ. ಕೇಸಾಪುರ, ರೇಣುಕಾ ಪಾಟೀಲ, ಎಂ.ಎಸ್. ಬಿರಾದಾರ, ಆರ್.ಬಿ. ಕುಲಕರ್ಣಿ, ಎಲ್.ಎಸ್. ಮೇಸಿ, ಬಿ.ವೈ. ಮೇಸಿ, ಬಿ.ಎ. ನಾಡಗೌಡ, ಎನ್.ಬಿ. ಮುದ್ನಾಳ, ಎಸ್.ಎಂ. ಕಾಡೂರ, ಮಾರುತಿ ಭೋವಿ ಮೊದಲಾದವರು ಪಾಲ್ಗೊಂಡಿದ್ದರು.