
ಸರ್ಕಾರಿ ಕಚೇರಿಗಳಲ್ಲಿ ನಾಡಧ್ವಜ ಹಾರಾಟ ಕಡ್ಡಾಯ, ಧ್ವಜಕ್ಕೆ ಹೊಸ ರೂಪ ನೀಡಲು ಚಿಂತನೆ
ಬೆಂಗಳೂರು, ನ. ೧- ಕನ್ನಡದ ಧ್ವಜಕ್ಕೆ ಹೊಸ ಸ್ವರೂಪ ನೀಡಿ ರಾಷ್ಟ್ರಧ್ವಜದ ಸ್ಥಾನಮಾನ ನೀಡುವ ಜತೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಾಟವನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕನ್ನಡ ರಾಜ್ಯೋತ್ಸವ ದಿನವಾದ ಇಂದು ಶಿಕ್ಷಣ ಇಲಾಖೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಧ್ವಜಕ್ಕೆ ರಾಷ್ಟ್ರಧ್ವಜದ ಸ್ಥಾನಮಾನ ನೀಡುವ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ ಎಂದರು.
ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೂ ಚರ್ಚಿಸಿದ್ದೇನೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಿ ರಾಷ್ಟ್ರಧ್ವಜದ ಗೌರವ ಮತ್ತು ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಸಚಿವ ಸಂಪುಟದಲ್ಲೂ ಈ ಬಗ್ಗೆ ತೀರ್ಮಾನ ಮಾಡಿ ಕಾನೂನು ತಂದು ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸುವ ತೀರ್ಮಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಕನ್ನಡ ಧ್ವಜಕ್ಕೆ ಸ್ಥಾನಮಾನ ನೀಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ಅದು ಜಾರಿಯಾಗಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಒಂದು ಕಾನೂನು ತಂದು ಅಧಿಕೃತ ಘೋಷಣೆ ಮಾಡಲಾಗುವುದು ಎಂದರು.
ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಾಟವನ್ನು ಕಡ್ಡಾಯ ಮಾಡಲಾಗುವುದು. ಹಾಗೆಯೇ ಖಾಸಗಿ ಕಂಪೆನಿಗಳು ಕನ್ನಡ ಬಾವುಟ ಹಾರಿಸಲು ಸಿದ್ದತೆ ಮಾಡಿಕೊಂಡಿವೆ ಎಂದರು.
ಯಾವುದೇ ರಾಜ್ಯಕ್ಕೂ ಈ ರೀತಿಯ ಧ್ವಜ ಇಲ್ಲ. ನಮ್ಮದೇ ಆದ ಧ್ವಜ ಇದೆ. ಈಗಿರುವ ಧ್ವಜಕ್ಕೆ ಹೊಸ ಸ್ವರೂಪ ನೀಡಿ ಅರಿಶಿನ ಕುಂಕುಮ ಬಣ್ಣದ ಜತೆಗೆ ಮತ್ತೊಂದು ಬಣ್ಣವನ್ನು ಸೇರಿಸಿ, ಮಧ್ಯೆದಲ್ಲಿ ಕನ್ನಡದ ಲಾಂಛನ ಅಳವಡಿಸಿ, ಹೊಸ ಧ್ವಜ ರೂಪಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು.
ಕನ್ನಡ ಧ್ವಜ ಹೇಗಿರಬೇಕು, ಯಾವ ರೀತಿ ಇದ್ದರೆ ಚೆಂದ ಎಲ್ಲದರ ಬಗ್ಗೆಯೂ ಎಲ್ಲರ ಮಾರ್ಗದರ್ಶನ ಪಡೆದು ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲೂ ಚರ್ಚೆ ನಡೆಸಿ ಸಾರ್ವಜನಿಕರ ಜತೆಯೂ ಚರ್ಚೆ ನಡೆಸಿ ಕನ್ನಡ ಧ್ವಜ ಸ್ವರೂಪದ ಬಗ್ಗೆ ಒಂದು ಸ್ಪಷ್ಟ ತೀರ್ಮಾನ ಮಾಡುವುದಾಗಿಯೂ ಅವರು ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಲ್ಲ ಕನ್ನಡಿಗರಿಗೂ ಶುಭಾಶಯ ಕೋರಿದ ಅವರು, ನಾವು ಯಾವುದೇ ದೇಶದಲ್ಲಿದ್ದರೂ ಉಸಿರು ಮಾತ್ರ ಕನ್ನಡವಾಗಿರಬೇಕು. ಇಲ್ಲಿಂದ ಬೇರೆ ದೇಶಕ್ಕೆ ಹೋದವರು ಸಂಘಟನೆ ಕಟ್ಟಿಕೊಂಡು ಕನ್ನಡ ಉಳಿಸುವ ಪ್ರಯತ್ನ ಮಾಡಿದ್ದಾರೆ. ಇಂದು ಕೇವಲ ಕನ್ನಡ ರಾಜ್ಯೋತ್ಸವ ಮಾತ್ರವಲ್ಲ, ಕನ್ನಡದ ತಾಯಿ ಭುವನೇಶ್ವರಿಯನ್ನು ಪೂಜಿಸುತ್ತಿದ್ದೇವೆ. ಒಂದು ರೀತಿಯಲ್ಲಿ ಇದು ಮಾತೃ ಪೂಜೆ ಎಂದರು.
ತಾಯಿಯನ್ನು ಪ್ರೀತಿಸುವುದು ಕನ್ನಡ ಭಾಷೆಯನ್ನು ಪ್ರೀತಿಸುವುದು ಎರಡೂ ಒಂದೇ. ಕನ್ನಡ ಭಾಷೆ ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ. ಶಾಸ್ತ್ರೀಯ ಸ್ಥಾನಮಾನ ಹೊಂದಿದೆ. ೮ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ.ಭಾಷೆ ಪ್ರೀತಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ಇದ್ದಾರೆ. ಕಲೆ, ವಿಜ್ಞಾನ, ಐಟಿ-ಬಿಟಿ ಸೇರಿದಂತೆ ಎಲ್ಲ ರಂಗದಲ್ಲೂ ಕನ್ನಡ ಸಾರ್ವಭೌಮ ಇದೆ. ಕನ್ನಡದ ಅಳಿವು-ಉಳಿವು ಮಕ್ಕಳ ಕೈಯಲ್ಲಿ ಇದೆ ಎಂದರು.
ಶಾಲೆಗಳಲ್ಲಿ ಎಐ ಶಿಕ್ಷಣ ತರಲಾಗುತ್ತಿದೆ. ಕನ್ನಡ ಪಬ್ಲಿಕ್ ಶಾಲೆಗೆ ಸಿಎಸ್ಆರ್ ಫಂಡ್ನಿಂದ ಉನ್ನತೀಕರಣ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರಿನ ರೀತಿ ಉನ್ನತ ಮಟ್ಟದ ಶಾಲೆಗಳನ್ನಾಗಿ ಮಾಡಲಾಗುತ್ತದೆ. ೧೫ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ಇಲಾಖೆಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ವಹಿಸಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.
ಕನ್ನಡ ಭಾಷೆ, ಕನ್ನಡ ಶಾಲೆ ಉಳಿಯಬೇಕು. ಕನ್ನಡ ಎಂಬುದು ಗುರುತು ಆಗಬಾರದು. ಅದು ನಮ್ಮ ಹೆಮ್ಮೆಯಾಗಬೇಕು.ಕನ್ನಡ ಕೇವಲ ಸರ್ಕಾರಿ ಭಾಷೆಯಲ್ಲ, ಹೃದಯದ ಭಾಷೆಯಾಗಬೇಕು. ನಮ್ಮ ಸರ್ಕಾರ ಕನ್ನಡ ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಗಣೇಶ್ ಹುಕ್ಕೇರಿ, ಡಾ. ಕೆ. ಗೋವಿಂದರಾಜು, ಎ.ಪಿ. ರಂಗನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಶಿಕ್ಷಣ ಇಲಾಖೆಯ ಆಯುಕ್ತೆ ವಿದ್ಯಾಕುಮಾರಿ, ಪೊಲೀಸ್ ಮಹಾನಿರ್ದೇಶಕ ಸಲೀಂ, ಪೊಲೀಸ್ ಆಯುಕ್ತ ಸೀಮಂತಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಜನಪರವಾದ ಯೋಜನೆಗಳಿಗೆ ಚಾಲನೆ
ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನಪರವಾದ ಯೋಜನೆಗಳಿಗೆ ಚಾಲನೆ ನೀಡಿದ್ದು, ಸಿಎಂ ವಿದ್ಯಾರ್ಥಿ ಹಸ್ತ, ಗ್ರಾಮಾನುಭವ ಯೋಜನೆಗಳಿಗೆ ಇಂದು ಚಾಲನೆ ನೀಡಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಗ್ರಾಮದ ಅನುಭವ ಮೂಡಿಸುವ ಗ್ರಾಮಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
೮, ೯ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಮ ವಾಸ್ತವ್ಯ ಮಾಡಿಸುವ ಗ್ರಾಮದ ಅನುಭವವನ್ನು ಮೂಡಿಸುವ ಯೋಜನೆ ಇದಾಗಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಆನ್ಲೈನ್ ತರಬೇತಿ ನೀಡುವ ವಿದ್ಯಾರ್ಥಿ ಸಹಾಯ ಹಸ್ತ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.


























