
ಕಮಲನಗರ: ತಾಲ್ಲೂಕಿನ ಠಾಣಾಕುಶನೂರಿನ ಶ್ರೀ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಇತ್ತೀಚೆಗೆ ನಡೆದ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜಿನ 77 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಪುಣೆಯ ಪ್ರಸಿದ್ಧ ‘ನೆಕ್ಸ್‍ಟೀರ್ ಆಟೊಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿಯು ನಡೆಸಿದ ಸಂದರ್ಶನದಲ್ಲಿ ಎಲೆಕ್ಟ್ರಿಕಲ್ ಆಯಿಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ 38, ಮೆಕ್ಯಾನಿಕಲ್ ವಿಭಾಗದ 18 ಹಾಗೂ ಎಲೆಕ್ಟ್ರಾನಿಕ್ಸ್ ಆಯಿಂಡ್ ಕಮ್ಯುನಿಕೇಷನ್ ವಿಭಾಗದ 21 ವಿದ್ಯಾರ್ಥಿಗಳು ಸೇರಿ ಒಟ್ಟು 77 ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ನಾಲ್ಕು ತಿಂಗಳು ಇಂಟರ್ನ್‍ಶಿಪ್ ಜೊತೆಗೆ ಶಿಷ್ಯವೇತನ (Sಣiಠಿeಟಿಜ) ನೀಡಲಾಗುವುದು. ಇಂಟರ್ನ್‍ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಆಕರ್ಷಕ ವೇತನದೊಂದಿಗೆ ಕಾಯಂ ಉದ್ಯೋಗ ದೊರೆಯಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ (ಊಖ) ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪಾಲಿಟೆಕ್ನಿಕ್ ಪ್ರಾಚಾರ್ಯ ರಾಜಶೇಖರ ಮುದ್ದಾ, “ನಮ್ಮ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಾ ಬಂದಿದೆ. ಈ ಕಾರಣದಿಂದಲೇ ಹೆಸರಾಂತ ಕಂಪನಿಗಳು ಪ್ರತಿ ವರ್ಷ ನಮ್ಮ ಕಾಲೇಜಿಗೆ ಆಗಮಿಸಿ ಕ್ಯಾಂಪಸ್ ಸಂದರ್ಶನ ನಡೆಸಿ ಉದ್ಯೋಗಾವಕಾಶ ಕಲ್ಪಿಸುತ್ತಿವೆ” ಎಂದು ಸಂತಸ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಸಂಜಯ್ ಭೋಸ್ಲೆ (ಎಲೆಕ್ಟ್ರಿಕಲ್), ರೇವಣಪ್ಪ ವಾಕಡೆ (ಎಲೆಕ್ಟ್ರಾನಿಕ್ಸ್ ಆಯಿಂಡ್ ಕಮ್ಯುನಿಕೇಷನ್), ಅಂತೇಶ್ವರ ವಾಡಲೆ (ಮೆಕ್ಯಾನಿಕಲ್), ಸೂರ್ಯಕಾಂತ ಮೇತ್ರೆ (ಸಿವಿಲ್) ಹಾಗೂ ಸಂಗಮೇಶ ಆಣದೂರೆ (ವಿಜ್ಞಾನ ವಿಭಾಗ) ಉಪಸ್ಥಿತರಿದ್ದರು.
ಕ್ಯಾಂಪಸ್ ಆಯ್ಕೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.





















