Home ಜಿಲ್ಲೆ ಅಥಣಿಗೆ ಉಪವಿಭಾಗ ಮಟ್ಟದ ಸಹಕಾರ ನಿಬಂಧಕರ ಕಚೇರಿ ಮಂಜೂರು

ಅಥಣಿಗೆ ಉಪವಿಭಾಗ ಮಟ್ಟದ ಸಹಕಾರ ನಿಬಂಧಕರ ಕಚೇರಿ ಮಂಜೂರು

ಅಥಣಿ : ಅಥಣಿ ಮತಕ್ಷೇತ್ರದ ಅಭಿವೃದ್ಧಿಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸಹಕಾರ ಕ್ಷೇತ್ರದ ಆಡಳಿತ ವ್ಯವಸ್ಥೆಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ನಡೆಸಿದ ನಿರಂತರ ಪ್ರಯತ್ನಕ್ಕೆ ಯಶಸ್ಸು ದೊರೆತಿದ್ದು, ಅಥಣಿಯಲ್ಲಿ ಉಪವಿಭಾಗ ಮಟ್ಟದ ಸಹಕಾರ ಸಂಘಗಳ ಸಹಕಾರ ನಿಬಂಧಕರ ಕಚೇರಿ ಮಂಜೂರಾಗಿದೆ.

ಅಥಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಹಕಾರ ಸಂಘಗಳ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದನೆ ದೊರೆತಂತಾಗಿದೆ. ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಹಕಾರ ಸಂಸ್ಥೆಗಳಿಗೆ ಆಡಳಿತಾತ್ಮಕವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕಚೇರಿ ಮಂಜೂರಾತಿ ಮಹತ್ವದ ನಿರ್ಧಾರವಾಗಿದೆ.
ಸಹಕಾರ ಕ್ಷೇತ್ರವು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಜೀವನಾಡಿಯಾಗಿದ್ದು, ರೈತರ ಆರ್ಥಿಕ ಸಬಲೀಕರಣ, ಗ್ರಾಮೀಣ ಜನರ ಸ್ವಾವಲಂಬನೆ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇಂತಹ ಸಹಕಾರ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಆಡಳಿತಾತ್ಮಕ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಬೇಕೆಂಬ ಆಶಯದೊಂದಿಗೆ ಸಚಿವ ಲಕ್ಷ್ಮಣ ಸವದಿ ಅವರು ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಿ ಸಂಬಂಧಿಸಿದ ಇಲಾಖೆಯ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದ್ದಾರೆ.
ಅವರ ಪ್ರಯತ್ನದ ಫಲವಾಗಿ ಇದೀಗ ಅಥಣಿಗೆ ಉಪವಿಭಾಗ ಮಟ್ಟದ ಸಹಕಾರ ನಿಬಂಧಕರ ಕಚೇರಿ ಮಂಜೂರಾಗಿರುವುದು ಸಹಕಾರ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

ದೂರದ ಕಚೇರಿಗಳಿಗೆ ಅಲೆದಾಟಕ್ಕೆ ಮುಕ್ತಿ….! ಅಥಣಿಯಲ್ಲಿ ಉಪವಿಭಾಗ ಮಟ್ಟದ ಸಹಕಾರ ಸಂಘಗಳ ಸಹಕಾರ ನಿಬಂಧಕರ ಕಚೇರಿ ಕಾರ್ಯಾರಂಭ ಮಾಡಿದ ನಂತರ ಅಥಣಿ ಉಪವಿಭಾಗದ ವ್ಯಾಪ್ತಿಯ ಸಹಕಾರ ಸಂಘಗಳ ಪದಾಧಿಕಾರಿಗಳು, ಆಡಳಿತ ಮಂಡಳಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಇಲಾಖೆಯ ವಿವಿಧ ಸೇವೆಗಳನ್ನು ಸ್ಥಳೀಯವಾಗಿಯೇ ಪಡೆಯಲು ಅನುಕೂಲವಾಗಲಿದೆ. ಸಹಕಾರ ಸಂಘಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು, ಮಾರ್ಗದರ್ಶನ ಹಾಗೂ ಇತರ ಇಲಾಖಾ ಕೆಲಸಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಇದರಿಂದ ಸಮಯ ಮತ್ತು ಶ್ರಮದ ಉಳಿತಾಯದ ಜೊತೆಗೆ ಸಹಕಾರ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿಯೂ ಸುಗಮತೆ ಉಂಟಾಗುವ ನಿರೀಕ್ಷೆಯಿದೆ.

ಸಹಕಾರ ಕ್ಷೇತ್ರಕ್ಕೆ ಬಲ, ರೈತರಿಗೆ ಅನುಕೂಲ….!
ಅಥಣಿ ಭಾಗದಲ್ಲಿ ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಸಹಕಾರ ಸಂಘಗಳ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸಲು ಈ ಕಚೇರಿ ಪ್ರಮುಖ ಪಾತ್ರ ವಹಿಸಲಿದೆ. ಸ್ಥಳೀಯ ಮಟ್ಟದಲ್ಲಿ ಇಲಾಖೆಯ ಆಡಳಿತಾತ್ಮಕ ವ್ಯವಸ್ಥೆ ಲಭ್ಯವಾಗುವುದರಿಂದ ಸಹಕಾರ ಸಂಘಗಳ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಕ್ರಿಯೆಯೂ ಸುಗಮವಾಗುವ ನಿರೀಕ್ಷೆಯಿದೆ. ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಚಿವ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಅಥಣಿಗೆ ಮತ್ತೊಂದು ಪ್ರಮುಖ ಆಡಳಿತಾತ್ಮಕ ಸೌಲಭ್ಯ ದೊರೆತಂತಾಗಿದೆ.
ಈ ಕಛೇರಿ ಮಂಜೂರಾತಿಯಿಂದ ಅಥಣಿ ಭಾಗದ ಸಹಕಾರ ಸಂಘಗಳ ಬೆಳವಣಿಗೆ, ರೈತರ ಅನುಕೂಲ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬಲವರ್ಧನೆಗೆ ಪೂರಕವಾದ ಮಹತ್ವದ ಹೆಜ್ಜೆಯಾಗಿದೆ.
ಬಹುದಿನಗಳ ಬೇಡಿಕೆಗೆ ಮನ್ನಣೆ, ಸಹಕಾರ ಕ್ಷೇತ್ರಕ್ಕೆ ಹೊಸ ಬಲ ಎಂಬಂತೆ ಅಥಣಿಗೆ ಉಪವಿಭಾಗ ಮಟ್ಟದ ಸಹಕಾರ ನಿಬಂಧಕರ ಕಚೇರಿ ಮಂಜೂರಾಗಿರುವುದು ಈ ಭಾಗದ ಸಹಕಾರ ವಲಯದಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ