Home ಮುಖಪುಟ ಸುದ್ದಿ ಆರ್ಥಿಕ ಸ್ಥಿತಿ ಹಳಿಗೆ ತನ್ನಿ: ಸಿಎಂಗೆ ಬಿವೈವಿ ಆಗ್ರಹ

ಆರ್ಥಿಕ ಸ್ಥಿತಿ ಹಳಿಗೆ ತನ್ನಿ: ಸಿಎಂಗೆ ಬಿವೈವಿ ಆಗ್ರಹ

ಬೆಂಗಳೂರು, ಮೇ. ೨- ರಾಜಕೀಯ ಮೇಲಾಟವನ್ನು ಬದಿಗಿಟ್ಟು ಹಳಿತಪ್ಪಿರುವ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವತ್ತ ಗಮನಹರಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.


ಅಧಿಕಾರಿದ ಹಪಾಹಪಿಗೆ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಮುಂದಿನ ಪೀಳಿಗೆಯನ್ನು ಸಾಲದ ಸುಳಿಗೆ ದೂಡುವುದು ಯಾವ ನ್ಯಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದ ಒಳಿತಿಗಾಗಿ ನಿಮ್ಮ ರಾಜಕೀಯ ಮೇಲಾಟ ಬದಿಗಿಟ್ಟು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವತ್ತ ಗಮನಹರಿಸಿ ಎಂದು ಅವರು ಒತ್ತಾಯಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು ಅವೈಜ್ಞಾನಿಕ ಆರ್ಥಿಕ ನಿರ್ವಹಣೆಯಿಂದಾಗಿ ರಾಜ್ಯದಲ್ಲಿ ಆದಾಯ ಸ್ವೀಕೃತಿಯ ಶೇ. ೧೫ಕ್ಕಿಂತ ಹೆಚ್ಚು ಹಣ ಬಡ್ಡಿ ಪಾವತಿಗೆ ವಯ್ಯವಾಗುತ್ತಿದೆ. ರಾಜ್ಯದ ಶೇ. ೦.೭ರಷ್ಟು ಆದಾಯ ಕೊರತೆ ಎದುರಿಸುತ್ತಿರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವುದಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ರಾಜಕೀಯ ಪರಿಗಣನೆ ಮತ್ತು ಮೇಲಾಟಗಳಿಂದಾಗಿ ರಾಜ್ಯದ ಅಭಿವೃದ್ಧಿ ಹಾಗೂ ಆದ್ಯತೆ ವಲಯಗಳಿಗೆ ಹಣವಿಲ್ಲದಂತಾಗಿದೆ. ಎದುರಾಗಬಹುದಾದ ಯಾವುದೇ ತುರ್ತುಪರಿಸ್ಥಿತಿಗಳಿಗೆ ಸ್ಪಂದಿಸುವ ಸಾಮರ್ಥ್ಯ ರಾಜ್ಯ ಸರ್ಕಾರ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.