
ಬೆಂಗಳೂರು,ಮೇ.೨೬-ಹೊರರಾಜ್ಯದ ಇಬ್ಬರು ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿರುವ ಸಿಸಿಬಿ ಹಾಗೂ ಜೀವನಭೀಮಾನಗರ ಪೊಲೀಸರು ೨.೪೦ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ೨.೪೦ ಕೋಟಿ ಮೌಲ್ಯದ ೩ ಕೆಜಿ ೩೧೨ ಗ್ರಾಂ ಹೈಡೋ ಗಾಂಜಾ, ೨೭ ಗ್ರಾಂ ಎಂಡಿಎಂಎ, ೧ ಕೆಜಿ ೨೭೨ ಗ್ರಾಂ ಗಾಂಜಾ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿ ಪೊಲೀಸರು ಕೆಂಪೇಗೌಡ ನಗರದ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್ಸ್‌ಗಳು ಬಂದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ದಾಳಿ ಮಾಡಿ ವಿದೇಶದಿಂದ ಬಂದಿದ್ದ ೩ ಕೆಜಿ ೩೧೨ ಗ್ರಾಂನ ನಿಷೇಧಿತ ಮಾದಕ ವಸ್ತು ಹೈಡೋಗಾಂಜಾವಿರುವ ಮೂರು ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
೧.೧೬ ಕೋಟಿ ಮೌಲ್ಯದ ವಿದೇಶದಿಂದ ನಿಷೇಧಿತ ಮಾದಕ ವಸ್ತುಗಳಿರುವ ಬಾಕ್ಸ್‌ಗಳನ್ನು ತರಿಸಿಕೊಂಡಿರುವ ಕಿರಣ್ ಕುಮಾರ್ ಸಮರ್ ಅಲಿ ಹಾಗೂ ಇತಿಹಾಸ್ ಖುರೇಶಿ ಮೂವರು ಪತ್ತೆಗಾಗಿ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶೋಧ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜೀವನಭೀಮಾನಗರ ಪೊಲೀಸರು ಟನಲ್ ರಸ್ತೆಯಲ್ಲಿ ಕೇರಳ ರಾಜ್ಯದ ನೋಂದಣಿಯಿರುವ ಕಾರೊಂದರಲ್ಲಿ ಡ್ರಗ್ಸ್ ಸಾಗಿಸುವ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿ ಕೇರಳಂ ಜುನೈದ್ ಹಾಗೂ ಮೊಹಮ್ಮದ್ ನನ್ನು ಬಂಧಿಸಿ ೪ ಲಕ್ಷ ಮೌಲ್ಯದ ೨೭ ಗ್ರಾಂ ಎಂಡಿಎಂಎ ೦೧ ಕೆಜಿ ೨೭೨ ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪಡೆದುಕೊಳ್ಳಲಾಗಿರುತ್ತದೆ ಎರಡು ಪ್ರಕರಣಗಳಲ್ಲಿ ಒಟ್ಟು ಮೌಲ್ಯ ೨.೪೦ ಕೋಟಿ ಮೌಲ್ಯದ್ದಾಗಿದೆ ಎಂದು ಹೇಳಿದರು.
ಸಿಸಿಬಿಯ ಉಪ ಪೊಲೀಸ್ ಆಯುಕ್ತ ರಾಜಾ ಇಮಾಮ್ ಖಾಸೀಂ ಹಾಗೂ ಪೂರ್ವ ವಿಭಾಗದ ಡಿಸಿಪಿ ಡಾ:ವಿಕ್ರಮ್ ಆಮಟೆ, ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಕಮೀಷನರ್ ತಿಳಿಸಿದರು.
























