Home ಮುಖಪುಟ ಸುದ್ದಿ ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ರಾಜಕೀಯ ಗಿಮಿಕ್

ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ರಾಜಕೀಯ ಗಿಮಿಕ್

ಬೆಂಗಳೂರು.ಮೇ೨೬: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಗ್ಯಾರೆಂಟಿ” ಯೋಜನೆಗಳು ಕೇವಲ ಕಾಂಗ್ರೆಸ್ ಪಕ್ಷದ ರಾಜಕೀಯ ಗಿಮಿಕ್ ಮಾತ್ರವೇ ಹೊರತು, ಬಡವರ ಬದುಕಿನ ಬಗ್ಗೆ ಅವರಿಗೆ ಯಾವುದೇ ನಿಜವಾದ ಕಾಳಜಿ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.


ಇಲ್ಲಿಯವರೆಗೆ “ಗ್ಯಾರೆಂಟಿ” ಎಂದು ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದ ರಾಜ್ಯ ಸರ್ಕಾರ, ಈಗ ಏಕಾಏಕಿ “ಫಲಾನುಭವಿಗಳ ಮರುಪರಿಶೀಲನೆ”, “ಮರು ನೋಂದಣಿ” ಹಾಗೂ “ವಿಶೇಷ ಅಭಿಯಾನ” ಎಂಬ ಹೊಸ ನಾಟಕವನ್ನು ಶುರು ಮಾಡಿದೆ ಎಂದು ಅವರು ಟೀಕಿಸಿದ್ದಾರೆ.


ಈ ಕುರಿತು ರಾಜ್ಯ ಸರ್ಕಾರಕ್ಕೆ ನೇರ ಪ್ರಶ್ನೆಗಳನ್ನು ಎಸೆದಿರುವ ಅವರು, “ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಸರ್ಕಾರದ ದೈನಂದಿನ ಮತ್ತು ನಿರಂತರ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಅದಕ್ಕಾಗಿ ವಿಶೇಷ ಅಭಿಯಾನದ ಡ್ರಾಮಾ ಮಾಡುವ ಅಗತ್ಯವೇನಿದೆ? ಬಡವರನ್ನು ಮತ್ತೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಲ್ಲಿಸುತ್ತಿರುವುದರ ಹಿಂದಿನ ರಹಸ್ಯವೇನು” ಎಂದು ಪ್ರಶ್ನಿಸಿದ್ದಾರೆ.


ಸ್ಥಳೀಯ ಸಂಸ್ಥೆ ಹಾಗೂ ಜಿಬಿಎ (ಬೃಹತ್ ಬೆಂಗಳೂರು ಪ್ರದೇಶ) ಚುನಾವಣೆಗಳವರೆಗೆ ಮಾತ್ರ ಹಣ ಕೊಟ್ಟು, ಚುನಾವಣೆ ಮುಗಿದ ನಂತರ “ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ” ಎಂದು ಕೈತೊಳೆಯುವ ಗುಪ್ತ ಯೋಜನೆ ಸರ್ಕಾರದ ಮುಂದಿದೆಯೇ ಅಥವಾ ಈ ಯೋಜನೆಗಳನ್ನು ಹಂತ ಹಂತವಾಗಿ ಸಂಪೂರ್ಣವಾಗಿ ನಿಲ್ಲಿಸಲು ಪೀಠಿಕೆ ಸಿದ್ಧವಾಗುತ್ತಿದೆಯೇ ಎಂದು ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.


೭ ಲಕ್ಷ ಕೋಟಿ ಸಾಲ: ರಾಜ್ಯದ ಒಟ್ಟು ಸಾಲದ ಹೊರೆ ಈಗಾಗಲೇ ೭ ಲಕ್ಷ ಕೋಟಿಯ ಗಡಿ ದಾಟಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ, ರೈತರಿಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಮತ್ತು ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಉತ್ತರವಿಲ್ಲ.


ಇಷ್ಟೆಲ್ಲಾ ಕಹಿ ವಾಸ್ತವಗಳಿದ್ದರೂ, ಕಾಂಗ್ರೆಸ್ ಸರ್ಕಾರ ಮಾತ್ರ ಕೇವಲ ತನ್ನ “ಗ್ಯಾರೆಂಟಿ” ಎಂಬ ರಾಜಕೀಯ ಗಿಮಿಕ್ ಉಳಿಸಿಕೊಳ್ಳುವುದರ ಮೇಲಷ್ಟೇ ಸಂಪೂರ್ಣ ಗಮನ ಹರಿಸಿದೆ ಎಂದು ಅವರು ದೂರಿದ್ದಾರೆ.


ಪ್ರತಿಪಕ್ಷ ನಾಯಕರು ಈ ಮರುಪರಿಶೀಲನೆಯ ಹೆಸರಿನಲ್ಲಿ ಜನರಲ್ಲಿ ಮೂಡಿರುವ ಆತಂಕವನ್ನು ಮುಂದಿಟ್ಟು, ಸರ್ಕಾರ ತಕ್ಷಣವೇ ಈ ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ


ಗ್ಯಾರೆಂಟಿ ಯೋಜನೆಗಳು ಭವಿಷ್ಯದಲ್ಲೂ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತವೆಯಾ ಇಲ್ಲವಾ ಮರು ನೋಂದಣಿ ಪ್ರಕ್ರಿಯೆ ಮುಗಿಯುವವರೆಗೆ ಸಾರ್ವಜನಿಕರ ಖಾತೆಗೆ ಹಣ ಬಿಡುಗಡೆ ಮಾಡುವುದನ್ನು ತಡೆಹಿಡಿಯಲಾಗುತ್ತದೆಯಾ ಅಥವಾ ನಿಯಮಿತವಾಗಿ ಹಣ ತಲುಪುತ್ತದೆಯಾ?ಈ ಫಲಾನುಭವಿಗಳ ಕಡಿತ ಪ್ರಕ್ರಿಯೆಯಲ್ಲಿ ಒಟ್ಟು ಎಷ್ಟು ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡಲು ಸರ್ಕಾರ ಗುರಿ ನಿಗದಿಪಡಿಸಿದೆ? ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿದ ನಂತರವೂ ಈ ಗ್ಯಾರೆಂಟಿ ಯೋಜನೆಗಳು ಇರುತ್ತವೆಯಾ ಪ್ರಶ್ನಿಸಿದರು.


“ಬಡವರ ಬದುಕಿನೊಂದಿಗೆ ಹಾಗೂ ಅವರ ಸ್ವಾಭಿಮಾನದೊಂದಿಗೆ ರಾಜಕೀಯ ಆಟ ಆಡುವುದು ಅತ್ಯಂತ ಅಪಾಯಕಾರಿ. ಗ್ಯಾರೆಂಟಿ ಹೆಸರಿನಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದ ನಂತರ, ಅದೇ ಜನರನ್ನು ಅಪರಾಧಿಗಳಂತೆ ಮತ್ತು ಅನುಮಾನಿತರಂತೆ ನೋಡುವುದು ಏಳೂವರೆ ಕೋಟಿ ಕನ್ನಡಿಗರಿಗೆ, ವಿಶೇಷವಾಗಿ ನಾಡಿನ ಸ್ವಾಭಿಮಾನಿ ಮಹಿಳೆಯರಿಗೆ ಮಾಡುತ್ತಿರುವ ಘೋರ ಅಪಮಾನ” ಎಂದು ಆರ್. ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.