
ಬೆಂಗಳೂರು.ಮೇ೨೬: ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಅಧಿಕಾರ ಹಸ್ತಾಂತರದ ಗೊಂದಲವನ್ನು ಹೈಕಮಾಂಡ್ ಶೀಘ್ರದಲ್ಲೇ ಬಗೆಹರಿಸಬೇಕು. ಇಲ್ಲದಿದ್ದರೆ ಅದು ನೇರವಾಗಿ ರಾಜ್ಯದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಅಧಿಕಾರಿಗಳು ಕೆಲಸ ಮಾಡದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಎಚ್ಚರಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿದ್ಯಮಾನಗಳು ಹಾಗೂ ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ನಾಯಕರ ಸಭೆಯ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರಾಜಕೀಯದಲ್ಲಿ ಗೊಂದಲಗಳ ನಿವಾರಣೆ ಶೀಘ್ರದಲ್ಲೇ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕೋ ಅಥವಾ ಸಂಪುಟ ಪುನಾರಚನೆಗೆ ಅವಕಾಶ ಕೊಡಬೇಕೋ ಎಂಬುದನ್ನು ಹೈಕಮಾಂಡ್ ಬೇಗ ತೀರ್ಮಾನಿಸಲಿ. ಇಲ್ಲದಿದ್ದರೆ ಅಧಿಕಾರಿಗಳ ಯೋಚನೆಯೇ ಬೇರೆ ಇರುತ್ತದೆ, ಅವರು ಸರಿಯಾಗಿ ಕೆಲಸ ಮಾಡುವುದಿಲ್ಲ,” ಎಂದು ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ತಾವು ದೆಹಲಿ ಪ್ರವಾಸ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವೈಯಕ್ತಿಕ ಕಾರಣಗಳಿಗಾಗಿ ಇಂದು ರಾತ್ರಿ ಅಮೆರಿಕಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಯ ಪ್ರಸಂಗ ಎದುರಾದರೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ತಮ್ಮ ಹಳೆಯ ಹೇಳಿಕೆಗೆ ರಾಜಣ್ಣ ಇಂದೂ ಪುನರುಚ್ಚಿರಿಸದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ. ಆದರೆ, ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್,” ಎಂದರು.
ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಆ ರೀತಿಯ ಯಾವುದೇ ಒಪ್ಪಂದ ಆಗಿಲ್ಲ ಎಂದೇ ನಾನು ಭಾವಿಸುತ್ತೇನೆ. ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಲು ಸೂಚಿಸಿದರೆ, ಒಂದು ಕ್ಷಣವೂ ಕಾಲಹರಣ ಮಾಡದೆ ಪದತ್ಯಾಗ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಅಷ್ಟು ಹೇಳಿದ ಮೇಲೆ ಸದ್ಯಕ್ಕೆ ಯಾವುದೇ ಗೊಂದಲ ಉಳಿದಿಲ್ಲ,” ಎಂದು ವಿವರಿಸಿದರು.
ವು ಈ ಹಿಂದೆ ಉಲ್ಲೇಖಿಸಿದ್ದ ’ಸೆಪ್ಟೆಂಬರ್ ಕ್ರಾಂತಿ’ ಕುರಿತು ಮರುಪ್ರಶ್ನಿಸಿದಾಗ, “ರಾಜಕಾರಣ ಎಂಬುದು ನಿಂತ ನೀರಲ್ಲ. ಸಮಸ್ಯೆಗಳು ಉದ್ಭವಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿರಂತರ ಪ್ರಕ್ರಿಯೆ. ನಾನು ಕ್ರಾಂತಿ ಎಂದು ಹೇಳಿದ್ದು ಕೇವಲ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಮಾತ್ರವಲ್ಲ, ಆ ರೀತಿಯ ರಾಜಕೀಯ ಬದಲಾವಣೆಯ ಕ್ರಾಂತಿ ಬಿಜೆಪಿಯಲ್ಲೂ ಆಗಬಹುದು,” ಎಂದು ಮಾರ್ಮಿಕವಾಗಿ ನುಡಿದರು.
ಸದ್ಯ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಹಾಗೂ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ. ಹಲವರು ಸಚಿವರಾಗಲು ಆಕಾಂಕ್ಷೆ ಹೊಂದಿದ್ದಾರೆ. ಆದರೆ ತಮಗೆ ಯಾವುದೇ ಸಚಿವ ಸ್ಥಾನದ ಆಸೆ ಇಲ್ಲ ಎಂದ ರಾಜಣ್ಣ, “ನಾನು ಮಂತ್ರಿಯಾಗಿದ್ದೂ ಆಯ್ತು, ಬಿಟ್ಟಿದ್ದೂ ಆಯ್ತು. ನನಗೀಗ ಮಂತ್ರಿ ಸ್ಥಾನ ಬೇಕು ಅಂತೇನೂ ಇಲ್ಲ, ನಾನು ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
























