
ಯಾದಗಿರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಮುಂದುವರಿದಿರುವಾಗಲೇ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಸರ್ಕಾರದ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಸುಮಾರು ?೧೮೬-೧೮೭ ಕೋಟಿ ಮೊತ್ತದ ಅವ್ಯವಹಾರ ನಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಅಕ್ಷಮ್ಯ ಎಂದು ಟೀಕಿಸಿದರು.
ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪವಿರುವ ಪ್ರಕರಣದಲ್ಲಿ ಸಂಬAಧಪಟ್ಟ ಸಚಿವರನ್ನೇ ಮತ್ತೆ ಸಂಪುಟಕ್ಕೆ ಸೇರಿಸಿರುವುದು ಆ ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದು ಅವರು ಆರೋಪಿಸಿದರು.
ನಿಗಮದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ತೆಲಂಗಾಣದಲ್ಲಿಯೂ ಖಾತೆಗಳನ್ನು ತೆರೆದು ಹಣವನ್ನು ಡ್ರಾ ಮಾಡಲಾಗಿದೆ ಎಂಬ ಅಂಶಗಳು ಜಾರಿ ನಿರ್ದೇಶನಾಲಯದ ತನಿಖಾ ದಾಖಲೆಗಳಲ್ಲಿ ಉಲ್ಲೇಖವಾಗಿವೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬAಧಿಸಿದAತೆ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಒತ್ತಾಯಿಸಿದರು.
‘ನಾಗೇಂದ್ರ ಅವರಿಗೆ ಇನ್ನೂ ಕ್ಲೀನ್‌ಚಿಟ್ ದೊರೆತಿಲ್ಲ. ಪ್ರಕರಣದ ತನಿಖೆ ಮುಂದುವರಿದಿರುವಾಗಲೇ ಅವರನ್ನು ಮತ್ತೆ ಸಚಿವರನ್ನಾಗಿ ಮಾಡುವ ಅಗತ್ಯವೇನಿತ್ತು? ಇದರ ಹಿಂದೆ ಯಾವುದಾದರೂ ಒತ್ತಡವಿದೆಯೇ?’ ಎಂದು ವಿಭೂತಿಹಳ್ಳಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ ಅವರು, ರಾಜೀನಾಮೆ ಪಡೆಯುವವರೆಗೆ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ನಾಯಕರು ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಿದ್ದಾರೆ. ಅಗತ್ಯವಿದ್ದರೆ ಜಿಲ್ಲಾಮಟ್ಟದಲ್ಲಿಯೂ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಯುವ ಮುಖಂಡ ಮಹೇಶಗೌಡ ಮುದ್ನಾಳ, ದೇವೇಂದ್ರ ನಾದಾ, ಹಿರಿಯ ನಾಯಕಿ ನಾಗರತ್ನ ಕುಪ್ಪಿ, ಬಸವರಾಜ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.





























