
ಕೋಲ್ಕತ್ತಾ/ನವದೆಹಲಿ, ಏ. ೨೪:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ದಾಖಲೆ ಮಟ್ಟದ ಮತದಾನ ನಡೆದ ಹಿನ್ನೆಲೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಪರ ಜನಮತ ಹರಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರದಿಂದ ಹೊರ ಹೋಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೊದಲ ಹಂತದ ಮತದಾನದ ಮೂಲಕವೇ ಜನರು ತಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಅಭಿವೃದ್ಧಿಗೆ ಬೆಂಬಲ ವ್ಯಕ್ತವಾಗಿದೆ. ಮತದಾನದ ಪ್ರಮಾಣವೇ ‘ದೀದಿ’ ಹೊರ ಹೋಗುತ್ತಿದ್ದಾರೆ ಎಂಬುದಕ್ಕೆ ಸೂಚನೆ ನೀಡುತ್ತಿದೆ” ಎಂದು ಹೇಳಿದರು.
ಮೊದಲ ಹಂತದ ೧೫೨ ಕ್ಷೇತ್ರಗಳಲ್ಲಿ ಬಿಜೆಪಿ ೧೧೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಭವಿಷ್ಯ ನುಡಿದರು. “ಎರಡನೇ ಹಂತದ ಬಳಿಕವೇ ನಾವು ಸರ್ಕಾರ ರಚಿಸುವ ಸ್ಥಿತಿಗೆ ಬರಲಿದ್ದೇವೆ” ಎಂದು ಶಾ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪುನಃಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ ಅವರು, “ಬಿಜೆಪಿ ಅಧಿಕಾರಕ್ಕೆ ಬಂದರೆ ಭಯರಹಿತ ಬಂಗಾಳ, ಭ್ರಷ್ಟಾಚಾರ ಮತ್ತು ಅತಿಕ್ರಮಣ ಮುಕ್ತ ಆಡಳಿತ, ಯುವಕರಿಗೆ ಉದ್ಯೋಗ ಹಾಗೂ ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ” ಎಂದು ಹೇಳಿದರು.

























