
ಬೀದರ್: ಇನ್ನು ಅಂಚೆ ಇಲಾಖೆ ಮೂಲಕ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಸಂಬಂಧಪಟ್ಟವರ ಮನೆ ಬಾಗಿಲಿಗೆ ತಲುಪಲಿವೆ.
ಅಂಚೆ ಇಲಾಖೆಯ ಬೀದರ್ ವಿಭಾಗ ಹಾಗೂ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದ ಈ ವಿಶಿಷ್ಟ ಸೇವೆಗೆ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಗುರುವಾರ ಚಾಲನೆ ನೀಡಿದರು.
ಅಂಚೆ ಇಲಾಖೆ ಸಾರ್ವಜನಿಕರ ಮನೆ ಬಾಗಿಲಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.
ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನ ಸಂದಣಿ ಕಡಿಮೆಯಾಗಲಿದೆ. ಬ್ರಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಕೆಲಸದ ಭಾರವೂ ತಗ್ಗಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮೊಹಮ್ಮದ್ ಆಹಮೊದ್ದೀನ್ ತಿಳಿಸಿದರು.
ಜನನ ಹಾಗೂ ಮರಣ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಕಳುಹಿಸುವ ಪ್ರಕ್ರಿಯೆ ಇಂದಿನಿಂದಲೇ ಜಾರಿಗೆ ಬಂದಿದೆ. ಗುರುವಾರ 4 ಜನನ ಪ್ರಮಾಣ ಪತ್ರಗಳನ್ನು ಆಸ್ಪತ್ರೆಯಿಂದ ಪಡೆದಿದ್ದು, ಲಕೋಟೆ ಮೇಲೆ ವಿಳಾಸದ ಸ್ಟಿಕ್ಕರ್ ಲಗತ್ತಿಸಿ ಸ್ಪೀಡ್ ಪೆÇೀಸ್ಟ್ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಹೇಳಿದರು.
ಸ್ಪೀಡ್ ಪೆÇೀಸ್ಟ್ ಹಾಗೂ ಇತರ ಖರ್ಚಿನ ಮೊತ್ತ ರೂ. 100 ಆಗಿದ್ದು, ಅದನ್ನು ಸಂಬಂಧಿಸಿದವರಿಂದ ಪಡೆಯಲಾಗುವುದು ಎಂದು ತಿಳಿಸಿದರು.
ಅಂಚೆ ಇಲಾಖೆಯ ಕಂಪ್ಲೇಂಟ್ ಇನ್ಸ್ಪೆಕ್ಟರ್ ಶ್ರೀಧರ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಇದ್ದರು.























