
ಯಾದಗಿರಿ: ಬಿಜೆಪಿಯಲ್ಲಿ ದೀರ್ಘಕಾಲ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ರಾಜಕೀಯ ಮುಖಂಡ ಸಾಬಣ್ಣ ಬಸವಂತಪುರ ಅವರು ಬಿಜೆಪಿ ತೊರೆದು ವಿಕಾಶೀಲ ಇನ್ಸಾನ್ ಪಕ್ಷ (ವಿಐಪಿ) ಸೇರ್ಪಡೆಗೊಂಡಿದ್ದು, ಅವರನ್ನು ಪಕ್ಷದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವಿಐಪಿ ಕರ್ನಾಟಕ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ.ಕೆ. ಅವರ ಆದೇಶದ ಮೇರೆಗೆ ಸಾಬಣ್ಣ ಬಸವಂತಪುರ ಅವರ ನೇಮಕಾತಿ ನಡೆದಿದ್ದು, ಅವರಿಗೆ ನೇಮಕಾತಿ ಆದೇಶವನ್ನು ಹಸ್ತಾಂತರಿಸಲಾಯಿತು.
ಬಿಜೆಪಿ ಸಂಘಟನೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ಸಾಬಣ್ಣ ಬಸವಂತಪುರ ಅವರು, ೧೯೯೦ರ ದಶಕದಲ್ಲಿ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಪಕ್ಷದ ಸಂಘಟನೆ ವಿಸ್ತರಣೆಗೆ ಶ್ರಮಿಸಿದ್ದರು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಸದಸ್ಯತ್ವ ಅಭಿಯಾನ ನಡೆಸುವುದರೊಂದಿಗೆ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಅಖAಡ ಗುಲ್ಬರ್ಗ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ, ಯಾದಗಿರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಟದ ಸಹ ಸಂಚಾಲಕ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವುದಾಗಿ ಅವರು ತಿಳಿಸಿದ್ದಾರೆ.
‘ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ನನ್ನಂತಹ ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ನೋವು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಚಟುವಟಿಕೆಗಳಿಂದ ದೂರ ಉಳಿದಿದ್ದೆ. ಶೋಷಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ವಂಚಿತ ಸಮುದಾಯಗಳ ಹಕ್ಕುಗಳ ಪರವಾಗಿ ಧ್ವನಿ ಎತ್ತುತ್ತಿರುವ ವಿಐಪಿ ಪಕ್ಷದ ತತ್ವ-ಸಿದ್ಧಾಂತಗಳು ನನ್ನನ್ನು ಆಕರ್ಷಿಸಿವೆ’ ಎಂದು ಸಾಬಣ್ಣ ಬಸವಂತಪುರ ಹೇಳಿದರು.
ತಮ್ಮ ರಾಜಕೀಯ ಅನುಭವವನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷರ ಜವಾಬ್ದಾರಿ ನೀಡಿರುವ ವಿಐಪಿ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಿ.ಕೆ. ಅವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದಾಗಿ ತಿಳಿಸಿದರು.
‘ಯಾದಗಿರಿ ಜಿಲ್ಲೆಯಲ್ಲಿ ಪಕ್ಷದ ಸೈದ್ಧಾಂತಿಕ ನೆಲೆಯನ್ನು ಸದೃಢಗೊಳಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಸಂಘಟನೆಯನ್ನು ವಿಸ್ತರಿಸುವುದು ಹಾಗೂ ಶೋಷಿತ, ಹಿಂದುಳಿದ ಮತ್ತು ವಂಚಿತ ವರ್ಗಗಳ ಆಶೋತ್ತರಗಳಿಗೆ ಧ್ವನಿಯಾಗುವುದು ನನ್ನ ಪ್ರಮುಖ ಆದ್ಯತೆ’ ಎಂದು ಅವರು ಹೇಳಿದರು.
ಸಾಬಣ್ಣ ಬಸವಂತಪುರ ಅವರ ಪಕ್ಷಾಂತರ ಹಾಗೂ ವಿಐಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಇದು ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ.





























