Home ಜಿಲ್ಲೆ ೧೯ರಂದು ಚಿತ್ರದುರ್ಗದಲ್ಲಿ ಭೋವಿ ಸಮಾಜದ ಜಾನೋತ್ಸವ: ಭರ್ಜರಿ ಸಿದ್ಧತೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ

೧೯ರಂದು ಚಿತ್ರದುರ್ಗದಲ್ಲಿ ಭೋವಿ ಸಮಾಜದ ಜಾನೋತ್ಸವ: ಭರ್ಜರಿ ಸಿದ್ಧತೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ

ಯಾದಗಿರಿ : ಜು.೧೦:ಚಿತ್ರದುರ್ಗದ ಶ್ರೀ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ ಅವರ ೧೭ನೇ ಪಟ್ಟಾಭಿಷೇಕ ಹಾಗೂ ೪೦ನೇ ಜನ್ಮೋತ್ಸವ (ಜಾನೋತ್ಸವ) ಅಂಗವಾಗಿ ಚಿತ್ರದುರ್ಗದಲ್ಲಿ ನಡೆಯಲಿರುವ ಭೋವಿ ಸಮಾಜದ ಮಹಾಸಮಾರಂಭಕ್ಕೆ ಬರದ ಸಿದ್ಧತೆಗಳು ನಡೆಯುತ್ತಿವೆ ಎಂದು ಕಲ್ಯಾಣ ಕರ್ನಾಟಕ ಭೋವಿ ಸಮಾಜ ಉಸ್ತುವರಿ ಸಮಿತಿ ಜಿಲ್ಲಾಧ್ಯಕ್ಷ ಸಿದ್ದು ಬಂಡಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾನೋತ್ಸವವನ್ನು ರಾಜ್ಯ ಮಟ್ಟದ ಐತಿಹಾಸಿಕ ಸಮಾರಂಭವನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭೋವಿ ಸಮಾಜದ ಬಂಧುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಮುಖ್ಯ ಅತಿಥಿಯಾಗಿ ಆಗಮಿಸುವ ನಿರೀಕ್ಷೆಯಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಸಹ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ರೂಪುರೇಷೆಗಳ ಕುರಿತು ತಿಪ್ಪಣ್ಣ ಒಡೆಯರ್ ವಿವರ ನೀಡಿದರು.

ಜಾನೋತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಬೃಹತ್ ರಕ್ತದಾನ ಶಿಬಿರ, ವಧು-ವರರ ಪರಿಚಯ ಕಾರ್ಯಕ್ರಮ, ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮಾಜದ ಏಕತೆ, ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು ೧,೫೦೦ರಿಂದ ೨,೫೦೦ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಭೋವಿ ಸಮಾಜದ ಸಂಘಟನೆ ಬಲವರ್ಧನೆ, ಯುವಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸಮಾಜದ ಪ್ರತಿಭಾವಂತರನ್ನು ಗೌರವಿಸುವ ನಿಟ್ಟಿನಲ್ಲಿ ಈ ಜಾನೋತ್ಸವ ಮಹತ್ವದ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಸದಸ್ಯರಾದ ಆರ್.ವಿ. ಪ್ರಕಾಶ್, ತಿಪ್ಪಣ್ಣ ಒಡೆಯರ್, ಹಣಮಂತ ಜೂಕುರ್, ಅಶೋಕ್ ಉಮಾಲೂಟಿ, ಬಳ್ಳಾರಿ ಜಿಲ್ಲಾಧ್ಯಕ್ಷ ರಾಮಾಂಜನೇಯ, ಪ್ರಕಾಶ್ ಬಳ್ಳಾರಿ, ಯಾದಗಿರಿ ಜಿಲ್ಲಾಧ್ಯಕ್ಷ ನಾಗಪ್ಪ ಬೆನಕಲ್, ಮಾರೆಪ್ಪ ವರ್ಕನಳ್ಳಿ, ಬಸವರಾಜ್ ಮುದ್ನಾಳ್, ಹಳ್ಳೆಪ್ಪ ದೋತ್ರೆ, ಹಣಮಂತ ವಲ್ಯಾಪುರ್, ದೇವರಾಜ್ ಮಸ್ಕನಹಳ್ಳಿ, ವಿಶ್ವನಾಥ್ ಮಂಜಲ್ಕರ್, ನರಸಿಂಹ ತಳಬಿಡಿ, ಮಹಾದೇವ ಗೋಪಾಲಪುರ, ಸಿದ್ದು ತಳಕ್, ಜಗ್ಗು ಚಿಂತನಲ್ಲಿ, ಸಂತೋಷ್ ಗುಂಜನೂರು, ಶರಣು ಬೈರಮಡ್ಡಿ ಹಾಗೂ ಆನಂದ ಅಮ್ಮಪುರ ಉಪಸ್ಥಿತರಿದ್ದರು.